IND vs ENG: ಇಂಗ್ಲೆಂಡ್‌ಗೆ ಚಚ್ಚಿದ ಅಭಿಷೇಕ್; ಮೊದಲ ಟಿ20 ಗೆದ್ದ ಭಾರತ
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ರೋಚಕವಾಗಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ. ಟೀಮ್ ಇಂಡಿಯಾ ಬೌಲರ್‌ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸಿದರು. ನಂತರ ಬಿರುಸಿನ ಬ್ಯಾಟಿಂಗ್ ಮಾಡಿದ ಭಾರತ 43 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ ಗೆಲುವು ಕಂಡಿತು. ಭಾರತ ತಂಡದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಕೊನೆಯ ಅವಕಾಶದಲ್ಲಿ ಮಿಂಚಿದರು.
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತದ ಬೌಲಿಂಗ್ ದಾಳಿ ತತ್ತರಿಸಿದ ಇಂಗ್ಲೆಂಡ್ 132 ರನ್ ಗಳಿಗೆ ಆಲೌಟಾಯಿತು. ಇಂಗ್ಲೆಂಡ್ ನೀಡಿದ 133 ರನ್‌ಗಳ ಗೆಲುವಿನ ಗುರಿಯನ್ನು ಭಾರತ 12.5 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಅಭಿಷೇಕ್ ಶರ್ಮಾ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಭಾರತದ ಗೆಲುವಿನ ಹೀರೋ ಆದರು.

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತಕ್ಕೆ ಇನಿಂಗ್ಸ್ ತೆರೆಯಲು ಬಂದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 41 ರನ್ ಸೇರಿಸಿದರು. ದಾಳಿಗಿಳಿದ ಜೋಫ್ರಾ ಆರ್ಚರ್ ಉತ್ತಮವಾಗಿ ಆಡುತ್ತಿದ್ದ ಸಂಜು ಅವರನ್ನು 26 ರನ್‌ಗಳಿಗೆ ಪೆವಿಲಿಯನ್‌ಗೆ ಕಳುಹಿಸಿದರು. ಸಂಜು 20 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು 130 ಸ್ಟ್ರೈಕ್ ರೇಟ್‌ನಲ್ಲಿ ಬಾರಿಸಿದರು. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಜೋಫ್ರಾ ಆರ್ಚರ್ ಎಸೆತದಲ್ಲಿ ವಿಕೆಟ್ ಕೀಪರ್ ಫಿಲ್ ಸಾಲ್ಟ್ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು.
ಇದಾದ ನಂತರ ಅಭಿಷೇಕ್ ಶರ್ಮಾ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದರು. ತಿಲಕ್ ವರ್ಮಾ ಅವರೊಂದಿಗೆ ಮೂರನೇ ವಿಕೆಟ್‌ಗೆ 90 ರನ್‌ಗಳ ಜೊತೆಯಾಟವನ್ನು ಪೂರ್ಣಗೊಳಿಸಿದರು. ಅಭಿಷೇಕ್ ಶರ್ಮಾ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 232.35 ರ ಸ್ಫೋಟಕ ಸ್ಟ್ರೈಕ್ ರೇಟ್‌ನೊಂದಿಗೆ 79 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ತಿಲಕ್ ವರ್ಮಾ 19 ಮತ್ತು ಹಾರ್ದಿಕ್ ಪಾಂಡ್ಯ 3 ರನ್ ಗಳಿಸಿಸುವ ಮೂಲಕ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತು.
ಇಂಗ್ಲೆಂಡ್ ತಂಡದ ಪರ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಇನ್ನಿಂಗ್ಸ್ ಆರಂಭಿಸಿದರು. ಸಾಲ್ಟ್ (0) ಮತ್ತು ಡಕೆಟ್ (4) ಅವರನ್ನು ಅರ್ಷದೀಪ್ ತಮ್ಮ ಬೌಲಿಂಗ್‌ನಲ್ಲಿ ಬಲಿ ಪಡೆದರು. ಇದಾದ ನಂತರ ಸ್ಪಿನ್ನ ದಾಳಿಗಿಳಿದ ವರುಣ್ ಹ್ಯಾರಿ ಬ್ರೂಕ್ (17) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (0)ರನ್ನು ಔಟ್ ಮಾಡಿದರು. ಜಾಕೋಬ್ ಬೆಥೆಲ್ (7), ಜೇಮಿ ಓವರ್ಟನ್ (2) ಮತ್ತು ಗಸ್ ಅಟ್ಕಿನ್ಸನ್ (2) ತಂಡಕ್ಕೆ ಆಸರೆಯಾಗಲಿಲ್ಲ. ಜೋಫ್ರಾ ಆರ್ಚರ್ (10), ಆದಿಲ್ ರಶೀದ್ (8) ಹಾಗು ಮಾರ್ಕ್ ವುಡ್ (1) ಔಟಾದರು.
ಭಾರತದ ಪರ ಹಾರ್ದಿಕ್, ಅರ್ಷದೀಪ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರು. ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟಿ20 ಜನವರಿ 25 ರಂದು ನಡೆಯಲಿದೆ.
ಅಭಿ ಅರ್ಭಟ
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅಬ್ಬರಿಸಿದರು. ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 79 ರನ್ ಬಾರಿಸಿದರು.
ಅಭಿಷೇಕ್ ಶರ್ಮಾ ಐಪಿಎಲ್ ಮತ್ತು ದೇಶೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾ ಪರ ಸತತವಾಗಿ ಅವಕಾಶಗಳನ್ನು ನೀಡಿದರೂ, ಅಭಿಷೇಕ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದೀಗ ಅವರು ತಮ್ಮ ಕೊನೆಯ ಅವಕಾಶದಲ್ಲಿ ಬಿಸಿಸಿಐ ಇಟ್ಟಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications