'ವಿರಾಟ್' ಶತಕದ ಮುಂದೆ ಮಂಡಿ ಊರಿದ ದಕ್ಷಿಣ ಆಫ್ರಿಕಾ

Posted By:
India won the series against South Afrcia by 5-1

ಸೆಂಚೂರಿಯನ್, ಫೆಬ್ರವರಿ 17: ವಿರಾಟ್ ಕೊಹ್ಲಿ ಅವರ ವಿರಾಟ್ ಶತಕದ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಸೆಂಚೂರಿಯನ್ ಪಾರ್ಕ್‌ನ ಅಂಗಳದ ಎಲ್ಲಾ ಮೂಲೆಗಳಿಗೆ ಚೆಂಡನ್ನಟ್ಟಿದ ವಿರಾಟ್ ಕೊಹ್ಲಿ ಕೇವಲ 96 ಎಸೆತದಲ್ಲಿ ಗಳಿಸಿದ್ದು ಬರೋಬ್ಬರಿ 129 ರನ್‌ 19 ಬೌಂಡರಿ, 2 ಸಿಕ್ಸರ್‌ ಭಾರಿಸಿ ಪ್ರೇಕ್ಷಕರನ್ನು ರಂಜಿಸಿದರು ಅವರು. ಇದು ಕೊಹ್ಲಿಯ 35 ನೇ ಶತಕ.

ದಕ್ಷಿಣ ಆಫ್ರಿಕಾ ನೀಡಿದ್ದ 205 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು ಇನ್ನೂ 18 ಓವರ್‌ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ದ.ಆಫ್ರಿಕಾ ಭಾರತದ ಬಿಗಿ ಬೌಲಿಂಗ್‌ ಮುಂದೆ ರನ್ ಗಳಿಸಿಸಲು ಪರದಾಡಿತು. ಭುವನೇಶ್ವರ್ ಕುಮಾರ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಶಾರ್ದೂಲ್ ಠಾಕೂರ್ 4 ವಿಕೆಟ್ ಗಳಿಸಿ ಮಿಂಚಿದರು. ಚಾಹಲ್ ಎರಡು ಮತ್ತು ಬುಮ್ರಾ ಎರಡು ವಿಕೆಟ್ ಕಬಳಿಸಿ ದ.ಆಫ್ರಿಕಾದ ಬೆನ್ನೆಲೆಬು ಮುರಿದರು.

ಆಫ್ರಿಕಾ ಪರ ಜುಂಡೊ 54 ಹೊರತು ಪಡಿಸಿದರೆ ಇನ್ನಾರೂ ಅರ್ಧ ಶತಕ ಗಳಿಸಲಿಲ್ಲ, ಬೌಲರ್‌ಗಳಾದ ಫೆಲಿಕ್ವಾಲೊ (34), ಮಾರ್ನೆ ಮಾರ್ಕಲ್ (20) ರನ್ ಗಳಿಸಿ ದ.ಆಫ್ರಿಕಾ 200 ಗಡಿ ದಾಟಲು ನೆರವಾದರು. ಹೆಚ್ಚಿನ ಭರವಸೆ ಇಟ್ಟಿದ್ದ ಎಬಿ ಡಿವಿಲಿಯರ್ಸ್‌ 30 ರನ್ ಭಾರಿಸಿ ಚಾಹಲ್‌ಗೆ ವಿಕೆಟ್ ಒಪ್ಪಿಸಿದರು.

ಗುರಿ ಬೆನ್ನತ್ತಿದ ಭಾರತವು ಉತ್ತಮ ಆರಂಭವನ್ನೇನು ಪಡೆಯಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ರೋಹಿತ್ ಶರ್ಮಾ 15 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಶಿಖರ್‌ ಧವನ್ 18 ರನ್‌ಗೆ ಬಾರಿಸಿ ಪೆವಿಲಿಯನ್ ಸೇರಿದರು.

ಆದರೆ ಆನಂತರ ಸೆಂಚೂರಿಯನ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಮೂಡಿಸಿದರು. ಅಜಿಂಕ್ಯಾ ರಹಾನೆ ಅವರೊಂದಿಗೆ ಇನ್ನಿಂಗ್ಸ್‌ ಸಂಭಾಳಿಸಿದ ಅವರು ದ.ಆಫ್ರಿಕಾದ ಎಲ್ಲ ಬೌಲರ್‌ಗಳಿಗೂ ತಮ್ಮ ಬ್ಯಾಟಿಂಗ್ ರುಚಿ ತೋರಿಸಿದರು.

ವಿರಾಟ್ ಕೊಹ್ಲಿಗೆ ಶತಕ ಬಾರಿಸುವುದು ಪುಸ್ತಕದ ಪುಟ ತಿರುಗಿಸಿದಷ್ಟೆ ಸಲೀಸು ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ ಕೆಲವು ದಿನಗಳ ಹಿಂದಷ್ಟೆ ಹೇಳಿದ್ದರು. ಅದನ್ನು ಮತ್ತೆ ಅವರು ಸಾಬೀತು ಪಡಿಸಿದರು.

ಇನ್ನೂ 17.1 ಓವರ್‌ ಬಾಕಿ ಇರುವಂತೆಯೇ ಭಾರತ ತಂಡ ವಿಜಯ ಗಳಿಸಿತು ವಿರಾಟ್‌ ಕೊಹ್ಲಿ ನಾಟೌಟ್‌ ಆಗಿ ಉಳಿದರು. ಕೊಹ್ಲಿಗೆ ಉತ್ತಮ ಸಾತ್ ನೀಡಿದ ಅಜಿಂಕ್ಯಾ ರಹಾನೆ (34) ಗಳಿಸಿದರು.

ಸರಣಿಯಲ್ಲಿ 558 ರನ್ ಗಳಿಸಿ ಮೂರು ಬಾರಿ ನಾಟೌಟ್‌ ಆಗಿ ಉಳಿದ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಗೌರವ ನೀಡಲಾಯಿತು. ಕೊನೆಯ ಪಂದ್ಯದ ಪಂದ್ಯ ಪುರುಶೋತ್ತಮ ಗೌರವೂ ಅವರ ಪಾಲೇ ಆಯಿತು.

Story first published: Saturday, February 17, 2018, 13:38 [IST]
Other articles published on Feb 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ