ತವರಿನಲ್ಲೇ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಭಾರತ ಕ್ರಿಕೆಟ್ ತಂಡ ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲಿದೆ. ಏಕೆಂದರೆ, ಇದೀಗ ಭಾರತೀಯ ಕ್ರಿಕೆಟ್ ತಂಡದಿಂದ ದೊಡ್ಡ ಉಡುಗೊರೆ ಹೊರಬಿದ್ದಿದೆ.
ಭಾರತ ತಂಡ ಇದೀಗ ಅಧಿಕೃತ ವಾಟ್ಸಾಪ್ (Whatsapp) ಖಾತೆಯನ್ನು ಹೊಂದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ, ಸೆಪ್ಟೆಂಬರ್ 14ರಂದು ಪ್ರಕಟಿಸಿದೆ.
ಎಕ್ಸ್ (ಟ್ವಿಟ್ಟರ್)ನ ಬಿಸಿಸಿಐನ ಅಧಿಕೃತ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಲಾಗಿದ್ದು, "ಟೀಮ್ ಇಂಡಿಯಾ ಈಗ WhatsApp ಖಾತೆ ಹೊಂದಿದೆ. ಹೊಸ ಅಪ್ಡೇಟ್‌ಗಳು, ವಿಶೇಷ ಫೋಟೋಗಳು ಮತ್ತು ತೆರೆಮರೆಯ ವಿಷಯಕ್ಕಾಗಿ ಸಂಪರ್ಕದಲ್ಲಿರಿ," ಎಂದು ಬರೆದುಕೊಂಡಿದೆ.

ಆದರೆ, ಈ ವಾಟ್ಸಾಪ್ ಖಾತೆಯಲ್ಲಿ ಅಭಿಮಾನಿಗಳು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂಬುದು ಗಮನಾರ್ಹವಾಗಿದೆ.
ಆದರೆ ಇದೀಗ ಭಾರತೀಯ ಕ್ರಿಕೆಟ್ ತಂಡ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿರುವುದು ವಿಶೇಷವಾಗಿದೆ. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ವಾಟ್ಸಾಪ್ ಚಾನೆಲ್‌ಗೆ ಸೇರಿದರೆ, ಭಾರತ ತಂಡಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೇರವಾಗಿ ಫೋನ್‌ಗೆ ಬರಲಿವೆ.
ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಹೊಸ ಅಪ್‌ಡೇಟ್‌ಗಳಿಗಾಗಿ ಕಾಯಬೇಕಾಗಿಲ್ಲ ಅಥವಾ ತಂಡದ ಪ್ರಕಟಣೆಗಳು, ಗಾಯದ ನವೀಕರಣಗಳು ಮತ್ತು ಭಾರತ ತಂಡಕ್ಕೆ ಸಂಬಂಧಿಸಿದ ಇತರ ಸುದ್ದಿಗಳನ್ನು ಪರಿಶೀಲಿಸಲು ವೆಬ್‌ಸೈಟ್‌ಗೆ ಹೋಗಬೇಕಾಗಿಲ್ಲ. ಇದೀಗ ಭಾರತೀಯ ಕ್ರಿಕೆಟ್‌ನ ಎಲ್ಲಾ ವಿಷಯಗಳು ವಾಟ್ಸಾಪ್‌ನಲ್ಲಿ ಲಭ್ಯವಾಗಲಿವೆ.
ಈ ಹಿಂದೆ, ಭಾರತೀಯ ಕ್ರಿಕೆಟ್ ತಂಡವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್)ನಂತಹ ಇತರ ಸಾಮಾಜಿಕ ಮಾಧ್ಯಮಗಳ ಖಾತೆ ಹೊಂದಿತ್ತು. ವಾಟ್ಸಾಪ್‌ಗೆ ಪದಾರ್ಪಣೆ ಮಾಡಿರುವುದು ಭಾರತೀಯ ಅಭಿಮಾನಿಗಳನ್ನು ಮೆಚ್ಚಿಸಿದೆ ಮತ್ತು ಈ ಕ್ರಿಕೆಟ್ ಕ್ರೇಜ್ ಹೆಚ್ಚಿರುವ ಭಾರತದಲ್ಲಿ ದೊಡ್ಡ ಸಂಖ್ಯೆಯ ಚಂದಾದಾರರು ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 2023ರ ಏಷ್ಯಾ ಕಪ್ ಫೈನಲ್‌ಗೆ ತಲುಪಿದ್ದು, ಇದಿಗ ತಮ್ಮ ಸಿದ್ಧತೆಯನ್ನು ಆರಂಭಿಸಿದೆ.
ಭಾರತ ತಂಡ ಎರಡು ದಿನಗಳ ಹಿಂದೆ ಶ್ರೀಲಂಕಾ ವಿರುದ್ಧದ ಗೆಲುವಿನೊಂದಿಗೆ ಇನ್ನೂ ಒಂದು ಬಾಕಿ ಇರುವಂತೆಯೇ ಪ್ರಸಕ್ತ ಪಂದ್ಯಾವಳಿಯ ಫೈನಲ್‌ಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿದರು.
ಪಾಕಿಸ್ತಾನದ ವಿರುದ್ಧದ ಭಾರತದ ಗುಂಪು ಹಂತದ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ನಂತರದ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ ಗೆಲುವು ಸಾಧಿಸಿತು. ಇನ್ನು ಸೂಪರ್ 4 ಹಂತದಲ್ಲಿ ಭಾರತ ತಂಡ ಮತ್ತೆ ಪಾಕಿಸ್ತಾನ ತಂಡವನ್ನು ಎದುರಿಸಿ 228 ರನ್‌ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತು.
ಇನ್ನು ತಮ್ಮ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದಿಂದ ದೊಡ್ಡ ಪೈಪೋಟಿ ಎದುರಿಸಿದರೂ, ಭಾರತ ತಂಡ ಆ ಪಂದ್ಯವನ್ನು 41 ರನ್‌ಗಳಿಂದ ಗೆದ್ದಿತು.
ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಬಾಂಗ್ಲಾದೇಶ ತಂಡ ಈಗಾಗಲೇ ಏಷ್ಯಾ ಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ. ತಮ್ಮ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸಲು ಬಾಂಗ್ಲಾದೇಶ ಎದುರು ನೋಡುತ್ತಿದೆ. ಇದೇ ವೇಳೆ ಭಾರತವು ಈ ಪಂದ್ಯವನ್ನು ಫೈನಲ್‌ಗೆ ಮೊದಲು ಅಭ್ಯಾಸದ ಪಂದ್ಯವಾಗಿ ಪರಿಗಣಿಸಲಿದೆ.