
ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಈ ಬಾರಿಯ ಐಪಿಎಲ್ ಟೂರ್ನಿಗೆ ಹರಾಜಾಗದೆ ಉಳಿದುಕೊಂಡಿದ್ದರು. ಇದೀಗ ಪೂಜಾರ ಕೌಂಟಿ ಕ್ರಿಕೆಟ್‌ನತ್ತ ಗಮನಹಿಸಿದ್ದಾರೆ. ಸಂಪೂರ್ಣ ಕೌಂಟಿ ಚಾಂಪಿಯನ್‌ಶಿಪ್ ಟೂರ್ನಿ ಹಾಗೂ ರಾಯಲ್ ಲಂಡನ್ ಏಕದಿನ ಟೂರ್ನಮೆಂಟ್‌ನಲ್ಲಿ ಚೇತೇಶ್ವರ್ ಭಾಗಿಯಾಗಲು ಸಸ್ಸೆಕ್ಸ್ ಪರವಾಗಿ ಚೇತೇಶ್ವರ್ ಪೂಜಾರ ಸಹಿ ಹಾಕಿದ್ದಾರೆ. ಇದಕ್ಕೂ ಹಿಂದೆ ಯಾರ್ಕ್‌ಶೈರ್ ಪರವಾಗಿ ಪೂಜಾರ ಕೌಂಟಿಯಲ್ಲಿ ಕಣಕ್ಕಿಳಿದಿದ್ದರು.
ಇನ್ನು 2020ರಲ್ಲಿ ಕೂಡ ಚೇತೇಶ್ವರ್ ಪೂಜಾರ ಗ್ಲೌಸ್ಟರ್‌ಶೈರ್ ಪರವಾಗಿ 6 ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಕೊರೊನಾವೈರಸ್ ಕಾರಣದಿಂದಾಗಿ ಈ ಒಪ್ಪಂದ ರದ್ದಾಗಿತ್ತು. ಇದೀಗ ಮತ್ತೊಮ್ಮೆ ಪೂಜಾರ ಕೌಂಟಿ ಕ್ರಿಕೆಟ್‌ನತ್ತ ಚಿತ್ತ ನೆಟ್ಟಿದ್ದಾರೆ.
ಈ ಬಾರಿಯ ಐಪಿಎಲ್ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಯಾವ ತಂಡ ಕೂಡ ಖರೀದಿಸಿರಲಿಲ್ಲ. ಕಳೆದ ವರ್ಷ ಭಾರತ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವುದಿದ್ದರೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರಾಜಾಗಿದ್ದ ಕಾರಣ ಕೌಂಟಿ ಕ್ರಿಕೆಟ್‌ನತ್ತ ಪೂಜಾರ ಗಮನಹರಿಸಿರಲಿಲ್ಲ.
ಇನ್ನು ಚೇತೇಶ್ವರ್ ಪೂಜಾರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪರವಾಗಿ ಆಯ್ಕೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಪೂಜಾರ ಫಾರ್ಮ್ ಕಳೆದುಕೊಂಡಿದ್ದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೂ ನೀರಸ ಪ್ರದರ್ಶನ ನೀಡಿದ್ದರು. ಹೀಗಾಗಿ ಆಯ್ಕೆ ಮಂಡಳಿ ರಣಜಿಯಲ್ಲಿ ಆಡಿ ಫಾರ್ಮ್ ಕಂಡುಕೊಳ್ಳಲು ಆಯ್ಕೆ ಮಂಡಳಿ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರಾಗೆ ಸೂಚನೆ ನೀಡಿತ್ತು. ಹೀಗಾಗಿ ರಣಜಿ ಟೂರ್ನಿಯಲ್ಲಿಯೂ ಈ ಅನುಭವಿ ಆಟಗಾರರು ಕಣಕ್ಕಿಳಿದಿದ್ದಾರೆ.
ಇನ್ನು ಚೇರ್ತೇಶ್ವರ್ ಪೂಜಾರ ಸಸ್ಸೆಕ್ಸ್ ತಂಡದ ಪರವಾಗಿ ಆಸ್ಟ್ರೇಲಿಯಾದ ಟ್ರೆವಿಸ್ ಹೆಡ್ ಬದಲಿಗೆ ವಿದೇಶಿ ಆಟಗಾರನ ಕೋಟಾದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಪೂಜಾರ ಒಪ್ಪಂದದ ಬಗ್ಗೆ ಸಸ್ಸೆಕ್ಸ್ ಮಾಹಿತಿ ಹಂಚಿಕೊಂಡಿದ್ದು ಈ ಆವೃತ್ತಿಯ ಆರಂಭದಿಂದ ಅಂತಿಮ ಹಂತದವರೆಗೂ ಸಸ್ಸೆಕ್ಸ್ ತಂಡದ ಪರವಾಗಿ ಆಡಲಿದ್ದಾರೆ ಎಂದು ಹೇಳಿದೆ. ಇನ್ನು ಇದೇ ಸಂದರ್ಭದಲ್ಲಿ ಸಸ್ಸೆಕ್ಸ್ ತಂಡ ಮಧ್ಯಂತರ ಬದಲಾವಣೆಯಾಗಿ ಜೋಶ್ ಫಿಲಿಪ್ಪೆ ಅವರೊಂದಿಗೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಬದಲಿಗೆ ಒಪ್ಪಂದ ಮಾಡಿಕೊಂಡಿದೆ.
ಇನ್ನು ಚೇತೇಶ್ವರ್ ಪೂಜಾರ ಅವರ ಪ್ರತಿಕ್ರಿಯೆಯನ್ನು ಕೂಡ ಸಸ್ಸೆಕ್ಸ್ ಹಂಚಿಕೊಂಡಿದ್ದು ಈ ಪ್ರಕಟಣೆಯಲ್ಲಿ ಪೂಜಾರ ಐತಿಹಾಸಿಕ ತಂಡದ ಪರವಾಗಿ ಆಡಲು ಉತ್ಸುಕನಾಗಿರುವುದಾಗಿ ಹೇಳಿಕೊಂಡಿದ್ದಾರೆ. "ಐತಿಹಾಸಿಕ ಸಸ್ಸೆಕ್ಸ್ ಕೌಂಟಿ ಬ್ಲಬ್ ತಂಡದ ಪರವಾಗಿ ಆಡಲು ನಾನು ಉತ್ಸುಕನಾಗಿದ್ದು ಇದು ನನಗೆ ದೊರೆತ ಗೌರವ ಎಂದು ಭಾವಿಸುತ್ತೇನೆ. ನಾನು ಸಸ್ಸೆಕ್ಸ್ ಕುಟುಂಬವನ್ನು ಶೀಘ್ರದಲ್ಲಿಯೇ ಸೇರಿಕೊಳ್ಳಲು ಎದುರು ನೋಡುತ್ತಿದ್ದು ಶ್ರೀಮಂತ ಕ್ರಿಕೆಟ್ ಇತಿಹಾಸದ ಭಾಗವಾಗಲು ಸಂತಸಗೊಂಡಿದ್ದೇನೆ ಎಂದಿದ್ದಾರೆ.
"ಕಳೆದ ಕೆಲ ವರ್ಷಗಳಿಂದ ನಾನು ಕೌಂಟಿ ಆಡುತ್ತಿದ್ದು ಯುಕೆಯಲ್ಲಿ ಕ್ರಿಕೆಟ್ ಆಡುವುದನ್ನು ನಾನು ಆನಂದಿಸುತ್ತಿದ್ದೇನೆ. ಹಾಗಾಗಿ ಹೊಸ ಪ್ರಯಾಣಕ್ಕೆ ನಾನು ಉತ್ಸುಕತೆಯಿಂದ ಕಾಯುತ್ತಿದ್ದೇನೆ. ಕ್ಲಬ್‌ನ ಯಶಸ್ಸಿಗಾಗಿ ನಾನು ಶ್ರಮಿಸಲಿದ್ದೇನೆ" ಎಂದು ಚೇತೇಶ್ವರ್ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೇತೇಶ್ವರ್ ಪೂಜಾರ ಇತ್ತೀಚೆಗೆ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡದ ಪರವಾಗಿ ಆಡಿದ್ದಾರೆ. ಮೂರು ಪಂದ್ಯಗಳಲ್ಲಿ ಪೂಜಾರ ಎರಡು ಶತಕಗಳೊಂದಿಗೆ 191 ರನ್ ಗಳಿಸಿದ್ದಾರೆ. ಆದರೆ ಸೌರಾಷ್ಟ್ರ ತಂಡ ರಣಜಿ ಟೂರ್ನಿಯ ನಾಕೌಟ್ ಹಂತಕ್ಕೇರಲು ವಿಫಲವಾಗಿದ್ದು ಲೀಗ್ ಹಂತದಲ್ಲಿಯೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ.