ಅಮ್ಮನಿಗೆ ಬೆಳ್ಳಂಬೆಳಿಗ್ಗೆ ಸರ್ಪ್ರೈಸ್ ನೀಡುವ ಆತುರದಲ್ಲಿ ಹೊರಟಿದ್ದ ರಿಷಭ್ ಪಂತ್!

ಟೀಮ್ ಇಂಡಿಯಾದ ಕ್ರಿಕೆಟಿಗ ರಿಷಭ್ ಪಂತ್ ಶುಕ್ರವಾರ ಮುಂಜಾನೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದು ಯಾವುದೇ ಮಾರಣಾಂತಿಕ ಗಾಯಕ್ಕೆ ಒಳಗಾಗಿಲ್ಲ ಎಂದು ಖಚಿತವಾಗಿದೆ. ಆದರೆ ಅಪಘಾದ ತೀವ್ರತೆ ಎಷ್ಟಿತ್ತೆಂದರೆ ಅಪಘಾತವಾದ ಕೆಲವೇ ಕ್ಷಣಗಳಲ್ಲಿ ಪಂತ್ ಕಾರು ಬೆಂಕಿಗೆ ಆಹುತಿಯಾಗಿದೆ.
ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿದಿದ್ದರು ರಿಷಭ್ ಪಂತ್. ಈ ಸರಣಿಯನ್ನು ಭಾರತ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಆದರೆ ಮುಂದಿನ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗದಿರುವ ಕಾರಣ ಈ ಅವಧಿಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಬಯಸಿದ್ದರು. ಇದೇ ಹಿನ್ನೆಲೆಯಲ್ಲಿ ಪಂತ್ ತಮ್ಮ ಕಾರಿನಲ್ಲಿ ಹೊರಟಿದ್ದರು ಎನ್ನಲಾಗಿದೆ.

ತಾಯಿಗೆ ಸರ್ಪ್ರೈಸ್ ನೀಡುವ ಆತುರ
ಮೂಲಗಳ ಮಾಹಿತಿಯ ಪ್ರಕಾರ ರಿಷಭ್ ಪಂತ್ ತಮ್ಮ ತಾಯಿಗೆ ಸರ್ಪ್ರೈಸ್ ನೀಡುವ ಹಿನ್ನೆಲೆಯಲ್ಲಿ ಬೆಳಿಗ್ಗೆ ದೆಹಲಿಯತ್ತ ಪ್ರಯಾಣಿಸಿದ್ದರು ಎನ್ನಲಾಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಅಮ್ಮನಿಗೆ ತಿಳಿಸದೆಯೇ ತಮ್ಮ ಮನೆಯತ್ತ ಪ್ರಯಾಣಿಸಿದ್ದರು. ಈ ಮೂಲಕ ತಾಯಿಯ ಮುಖದ ಸಂಭ್ರಮ ನೋಡುವ ಬಯಕೆ ಹೊಂದಿದ್ದರು. ಆದರೆ ದಾರಿ ಮಧ್ಯೆ ಅಪಘಾತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಟೀಮ್ ಇಂಡಿಯಾದ ಆಟಗಾರ ಬಹುದೊಡ್ಡ ಅಪಾಯದಿಂದ ಪಾರಾಗಿದ್ದಾರೆ.

ನಿದ್ದೆಯ ಮಂಪರು ಅಪಘಾತಕ್ಕೆ ಕಾರಣ
ಡೆಹ್ರಾಡೂನ್‌ನಿಂದ ದೆಹಲಿಯತ್ತ ಪ್ರಯಾಣಿಸುತ್ತಿದ್ದ ರಿಷಭ್ ಪಂತ್ ಹರಿದ್ವಾರ ಜಿಲ್ಲೆಯ ಮಂಗ್ಲೌರ್ ಹಾಗೂ ನರ್ಸಾನ್ ಮಧ್ಯೆ ಅಪಘಾತಕ್ಕೆ ಒಳಗಾಗಿದ್ದಾರೆ. ಈ ಅಪಘಾತದ ಬಗ್ಗೆ ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಸ್ವತಃ ರಿಷಭ್ ಪಂತ್ ಹೇಳಿರುವಂತೆ ನಿದ್ದೆಯ ಮಂಪರಿಗೆ ಒಳಗಾದ ಕಾರಣ ಕಾರು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದಿದ್ದಾರೆ ಡಿಜಿಪಿ ಅಶೋಕ್ ಕುಮಾರ್. ಅಪಘಾತದ ಸಂದರ್ಭದಲ್ಲಿ ರಿಷಭ್ ಪಂತ್ ಮಾತ್ರವೇ ಕಾರಿನಲ್ಲಿದ್ದರು.

ಹಣೆ, ಬೆನ್ನು ಹಾಗೂ ಮೊಣಕಾಲಿಗೆ ಗಾಯ
ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಮಾರಣಾಂತಿಕ ಗಾಯಕ್ಕೆ ತುತ್ತಾಗಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪಂತ್ ಅವರ ಹಣೆ, ಬೆನ್ನು ಹಾಗೂ ಮೊಣಕಾಲಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿದೆ. ಪ್ರಾಥಮಿಕ ಚಿಕಿತ್ಸೆಯನ್ನು ರೂರ್ಕಿಯ ಆಸ್ಪತ್ರೆಯಲ್ಲಿ ನೀಡಿದ ಬಳಿಕ ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುರ್ತು ಚಿಕಿತ್ಸೆ ನೀಡಿದ ವೈದ್ಯರಿಂದ ಮಾಹಿತಿ
ಇನ್ನು ರಿಷಭ್ ಪಂತ್‌ಗೆ ತುರ್ತು ಚಿಕಿತ್ಸೆ ನೀಡಿದ ಡಾ. ಸುಶಿಲ್ ನಗರ್ ರಿಷಭ್ ಪಂತ್ ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಹಣೆಯಲ್ಲಿ ಸೀಳು ಗಾಯಗಳಾಗಿದೆ, ಮೊಣಕಾಲಿನ ಅಸ್ಥಿರಜ್ಜು ಘಾಸಿಯಾಗಿದ್ದು ಬೆನ್ನಿನ ಚರ್ಮ ಸವೆದಿದೆ. ಆದರೆ ಎಕ್ಸರೇ ಪ್ರಕಾರ ಯಾವುದೇ ಮೂಳೆಗೆ ಹಾನಿಯಾಗಿಲ್ಲ ಹಾಗೂ ಕೆಲ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ" ಎಂದು ಡಾ. ಸುಶೀಲ್ ನಗರ್ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications