ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಬದುಕಿನ ಎರಡನೇ ಇನ್ನಿಂಗ್ಸ್‌ಗೆ ಕಾಲಿಟ್ಟಿದ್ದಾರೆ. ಶನಿವಾರ ಋತುರಾಜ್ ಗಾಯಕ್ವಾಡ್ ಹಾಗೂ ಅವರ ದೀರ್ಘ ಕಾಲದ ಗೆಳತಿ ಉತ್ಕರ್ಷ ಪವಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಋತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಅದ್ಭುತವಾದ ಪ್ರದರ್ಶನ ನೀಡಿದ್ದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಐದನೇ ಬಾರಿಗೆ ಚಾಂಪಿಯನ್ ಎನಿಸಿಕೊಂಡಿತ್ತು. ಅದಾದ ಋತು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಮೀಸಲು ಆಟಗಾರನಾಗಿ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ವಿವಾಹದ ಕಾರಣದಿಂದಾಗಿ ಋತುರಾಜ್ ಗಾಯಕ್ವಾಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ.

ಇನ್ನು ಋತುರಾಜ್ ಗಾಯಕ್ವಾಡ್ ಅವರಂತೆ ಉತ್ಕರ್ಷ ಕೂಡ ಮಹಾರಾಷ್ಟ್ರದ ಕ್ರಿಕೆಟ್ ಆಟಗಾರ್ತಿ. ಇತ್ತೀಚೆಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಐಪಿಎಲ್ 16ನೇ ಆವೃತ್ತಿಯಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಋತುರಾಜ್ ಗಾಯಕ್ವಾಡ್ ಹಾಗೂ ಉತ್ಕರ್ಷಾ ಪವಾರ್ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಜೊತೆಗೆ ಪೋಸ್ ನೀಡಿದ್ದರು.
ಕುಟುಂಬದ ಸದಸ್ಯರು ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಈ ವಿವಾಹ ಕಾರ್ಯಕ್ರಮ ಸರಳವಾಗಿ ನೆರವೇರಿದೆ. ಈ ವಿವಾಹ ಸಮಾರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾದ ಶಿವಂ ದುಬೆ ಹಾಗೂ ಪ್ರಶಾಂತ್ ಸೋಲಂಕಿ ಭಾಗಿಯಾಗಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ನವ ಜೋಡಿಗೆ ಶುಭಾಶಯಗಳು ಹರಿದುಬರುತ್ತಿದ್ದು ಶಿಖರ್ ಧವನ್, ರಶೀದ್ ಖಾನ್, ಶ್ರೇಯಸ್ ಐಯ್ಯರ್ ಮತ್ತು ಉಮ್ರಾ್ ಮಲಿಕ್ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನಿಡಿದ ಆಟಗಾರರ ಪೈಕಿ ಋತುರಾಜ್ ಗಾಯಕ್ವಾಡ್ ಕೂಡ ಒಬ್ಬರು. ಸಿಎಸ್‌ಕೆ ಪರವಾಗಿ ತಮ್ಮ ಆರಂಭಿಕ ಜೊತೆಗಾರ ಡೆವೋನ್ ಕಾನ್ವೆ ಜೊತೆಗೆ ಅನೇಕ ನಿರ್ಣಾಯಕ ಜೊತೆಯಾಟದಲ್ಲಿ ಋತು ಭಾಗಿಯಾಗಿದ್ದರು. 16 ಪಂದ್ಯಗಳನ್ನು ಆಡಿರುವ ಋತುರಾಜ್ ಗಾಯಕ್ವಾಡ್ 42.14ರ ಸರಾಸರಿಯಲ್ಲಿ 590 ರನ್‌ಗಳನ್ನು ದಾಖಲಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರ ಬ್ಯಾಟ್‌ನಿಂದ ನಾಲ್ಕು ಅರ್ಧ ಶತಕ ಕುಡ ದಾಖಲಾಗಿದ್ದು 92 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
2019ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಋತುರಾಜ್ ಗಾಯಕ್ವಾಡ್ ಬಳಿಕ ಸಾಕಷ್ಟು ಭರವಷೆಯ ಪ್ರದರ್ಶನಗಳನ್ನು ನಿಡುತ್ತಲೇ ಬಂದಿದ್ದಾರೆ. ಟೂರ್ನಿಯಲ್ಲಿ ಈವರೆಗೆ 39.07ರ ಸರಾಸರಿಯಲ್ಲಿ 1797 ರನ್‌ಗಳನ್ನು ಗಳಿಸಿರುವ ಅವರು 135.52 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 14 ಅರ್ಧ ಶತಕ ಸಿಡಿಸಿರುವ ಋತು ಅಜೇಯ 101 ರನ್‌ಗಳಿಸಿರುವುದು ಅವರ ಗರಿಷ್ಠ ಸ್ಕೋರ್.
ಇನ್ನು ಋತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಟೀಮ್ ಇಂಡಿಯಾ ಪರವಾಗಿಯೂ 9 ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕದ ಸಹಿತ ಋತು 135 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಒಂದು ಏಕದಿನ ಪಂದ್ಯದಲ್ಲಿಯೂ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.