Ind vs Aus 3rd Test: ಭಾರತದ ನೆಲದಲ್ಲಿ ಅಪರೂಪದ ಸಾಧನೆ ಮಾಡಿದ ವೇಗಿ ಉಮೇಶ್ ಯಾದವ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿದೆ. ಮೊದಲ ದಿನ ಟೀಮ್ ಇಂಡಿಯಾದ ಕುಸಿತದ ಬಳಿಕ ಆಸ್ಟ್ರೇಲಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ದೊಡ್ಡ ಭಾರತಕ್ಕೆ ಹಿನ್ನಡೆಯುಂಟು ಮಾಡಿದ್ದರೆ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಭಾರತವನ್ನು ಪಂದ್ಯದಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದಾರೆ. ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದ ಜೊತೆಗೆ ವೇಗಿ ಉಮೇಶ್ ಯಾದವ್ ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
ಉಮೇಶ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ ನೂರು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಈ ಸಾಧನೆ ಮಾಡಿದ ಕೇವಲ 5ನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಉಮೇಶ್ ಯಾದವ್. 74ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಮೂಲಕ ಈ ವಿಶೇಷ ಸಾಧನೆಯನ್ನು ಉಮೇಶ್ ಯಾದವ್ ಪೂರ್ಣಗೊಳಿಸಿದ್ದಾರೆ.
ದಿಗ್ಗಜ ಕ್ರಿಕೆಟಿಗ ಮಾಜಿ ನಾಯಕ ಕಪಿಲ್‌ದೇವ್ ಭಾರತದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಪಿಲ್‌ದೇವ್ 219 ವಿಕೆಟ್‌ಗಳನ್ನು ಭಾರತದಲ್ಲಿ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಜಾವಗಲ್ ಶ್ರೀನಾಥ್ ಇದ್ದು 108 ಟೆಸ್ಟ್ ವಿಕೆಟ್ ಪಡೆದುಕೊಂಡಿದ್ದಾರೆ. ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ನಂತರದ ಸ್ಥಾನದಲ್ಲಿದ್ದು ಇವರಿಬ್ಬರು ತಲಾ 104 ವಿಕೆಟ್‌ಗಳನ್ನು ಭಾರತದಲ್ಲಿ ಪಡೆದುಕೊಂಡಿದ್ದಾರೆ.
ಇನ್ನು ಇಂದೋರ್ ಟೆಸ್ಟ್‌ನಲ್ಲಿ ಎರಡನೇ ದಿನ ಭಾರತ ಬಿಗುವಿನ ಬೌಲಿಂಗ್ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆಸ್ಟ್ರೇಲಿಯಾಗೆ 88 ರನ್‌ಗಳ ಮುನ್ನಡೆಯನ್ನು ಮಾತ್ರವೇ ಮೊದಲ ಇನ್ನಿಂಗ್ಸ್‌ನಲ್ಲಿ ಪಡೆಯಲು ಸಾಧ್ಯವಾಯಿತು. ಭಾರತ ತಂಡದ ಪರವಾಗಿ ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳ ಜೊತೆಗೆ ವೇಗಿ ಉಮೇಶ್ ಯಾದವ್ ಕೂಡ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾದ ಕೆಳ ಕ್ರಮಾಂಕದ ಆಟಗಾರರಿಗೆ ಉಮೇಶ್ ಯಾದವ್ ಕಂಟಕವಾದರು. ಮೊದಲಿಗೆ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಗ್ರೀನ್ ನಂತರ ಸ್ಟಾರ್ಕ್ ಹಾಗೂ ಮರ್ಫಿ ಅವರನ್ನು ಬೌಲ್ಡ್ ಮಾಡುವ ಮೂಲಕ ಆಸಿಸ್ ತಂಡ ಬೇಗನೆ ಆಲೌಟ್ ಆಗಲು ಕಾರಣವಾದರು. ಈ ಮೂಲಕ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಯಾವ ರೀತಿ ಬ್ಯಾಟಿಂಗ್ ನಡೆಸಲಿದೆ ಎಂಬುದು ಬಹಳ ಕುತೂಹಲ ಮೂಡಿಸಿದೆ.
ಇತ್ತಂಡಗಳ ಸ್ಕ್ವಾಡ್
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (WK), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್
ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (WK), ಮಿಚೆಲ್ ಸ್ಟಾರ್ಕ್, ಅಥಾನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕನ್ನೇಮನ್
ಬೆಂಚ್: ಮಿಚೆಲ್ ಸ್ವೆಪ್ಸನ್, ಮ್ಯಾಟ್ ರೆನ್ಶಾ, ಸ್ಕಾಟ್ ಬೋಲ್ಯಾಂಡ್, ಲ್ಯಾನ್ಸ್ ಮೋರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications