ನಟರಾಜನ್ ಬಗ್ಗೆ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು: ಮೃದು ಮಾತುಗಳಲ್ಲಿ ನಟ್ಟು ಹೇಳಿದ್ದಿಷ್ಟು !

ಟೀಮ್ ಇಂಡಿಯಾದ ವೇಗಿ ನಟರಾಜನ್ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ತೆರಳಿ ಬಳಿಕ ಮೂರು ಮಾದರಿಯಲ್ಲೂ ಪದಾರ್ಪಣೆ ಮಾಡಿರುವುದು ಈಗ ಇತಿಹಾಸ. ತನ್ನ ನಿಖರ ದಾಳಿಯ ಮೂಲಕ ಮಿಂಚು ಹರಿಸಿದರು ಸಿಕ್ಕ ಅವಕಾಶವನ್ನು ಅದ್ಭುತ ರೀತಿಯಲ್ಲಿ ಬಾಚಿಕೊಂಡಿದ್ದಾರೆ. ಹೀಗಾಗಿ ಯುವ ಆಟಗಾರರಿಗೆ ನಟರಾಜನ್ ಸ್ಪೂರ್ತಿಯಾಗಿದ್ದಾರೆ.
ತಮಿಳುನಾಡು ಮೂಲದ ಈ ವೇಗಿ ಐಪಿಎಲ್‌ನಲ್ಲಿ ಹೀರೋ ಆಗಿ ಮಿಂಚಿ ಆಸ್ಟ್ರೇಲಿಯಾ ನೆಲದಲ್ಲೂ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ ನಟರಾಜನ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗನಾಗಿ ರೂಪುಗೊಳ್ಳುವ ಮುನ್ನ ನಡೆದುಬಂದ ಹಾದಿ ಸಾಕಷ್ಟು ಕುತೂಹಲಕಾರಿ ಹಾಗೂ ಸ್ಪೂರ್ತಿದಾಯಕವಾಗಿದೆ. ಇದು ಈಗ ಸಿನಿಮಾ ನಿರ್ದೇಶಕರ ಗಮನವನ್ನು ಸೆಳೆದಿದೆ. ಹೀಗಾಗಿ ನಟರಾಜನ್ ಸಾಧನೆ ಹಾಗೂ ಜೀವನದ ಬಗ್ಗೆ ಸಿನಿಮಾ ನಿರ್ಮಾಣಕ್ಕೆ ಹಲವು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ನಟರಾಜನ್ ಮೃದು ಮಾತುಗಳಲ್ಲೇ ಉತ್ತರವನ್ನು ನೀಡಿದ್ದು ತಮ್ಮ ಕನಸನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ನಟರಾಜನ್ ಬಂದ ಹಾದಿಯೇ ಸಿನಿಮಾದಂತಿದೆ
ನಟರಾಜನ್ ಸಿನಿಮಾ ಮಾಡಲು ನಿರ್ದೇಶಕರು ಮುಗಿ ಬೀಳಲು ಕಾರಣವೂ ಇದೆ. ಟೆನ್ನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದು ಬಳಿಕ ಐಪಿಎಲ್‌ಗೆ ಅವಕಾಶವನ್ನು ಪಡೆದುಕೊಂಡಿದ್ದು ಹಾಗೂ ಟೀಮ್ ಇಂಡಿಯಾಗೆ ಆಯ್ಕೆಯಾದ ಹಾದಿ ಸಾಕಷ್ಟು ಸ್ಪೂರ್ತಿಯಾಗುವಂತಿದೆ. ಹೀಗಾಗಿ ನಟರಾಜನ್ ಜೀವನದ ಕುರಿತಾದ ಸಿನಿಮಾ ನಿರ್ಮಾಣಕ್ಕೆ ಸಾಕಷ್ಟು ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ.

ಆಸಿಸ್ ಪ್ರವಾಸದ ವೇಳೆ ನಟ್ಟು ನಿವಾಸದತ್ತ ನಿರ್ದೇಶಕರು
ಅತ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಟರಾಜನ್ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದರೆ ಇತ್ತ ತಮಿಳುನಾಡಿನಲ್ಲಿ ಸಿನಿಮಾ ನಿರ್ದೇಶಕರು ನಟರಾಜನ್ ಬಗ್ಗೆ ಚಿತ್ರ ನಿರ್ಮಿಸುವ ಸಲುವಾಗಿ ನಟರಾಜನ್ ಮನೆಯತ್ತ ಧಾವಿಸುತ್ತಿದ್ದರು. ಈ ಬಗ್ಗೆ ಸ್ವತಃ ನಟರಾಜನ್ "ಡೆಕ್ಕನ್ ಕ್ರೋನಿಕಲ್" ಜೊತೆಗೆ ಮಾತನಾಡುತ್ತಾ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಸಾಕಷ್ಟು ಸಿನಿಮಾ ನಿರ್ದೇಶಕರು ಮನೆಗೆ ಬಂದು ತಮ್ಮ ಯೋಜನೆಯನ್ನು ಹೇಳಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗ ನನ್ನ ಮುಂದಿರುವ ಗುರಿ ಒಂದೇ..
ಆದರೆ ಟಿ ನಟರಾಜನ್ ಬಗ್ಗೆ ಸಿನಿಮಾ ಮಾಡಲು ಮುಂದಾಗಿರುವ ಬಗ್ಗೆ ಟಿ ನಟರಾಜನ್ "ನಾನು ಆ ಬಗ್ಗೆ ಈಗ ಯಾವುದೇ ಆಲೋಚನೆಯನ್ನೂ ಹೊಂದಿಲ್ಲ. ಟೀಮ್ ಇಂಡಿಯಾದಲ್ಲಿ ನನ್ನ ಸ್ಥಾನವನ್ನು ಗಟ್ಟಿಗೊಳಿಸುವುದಷ್ಟೇ ನನ್ನ ಮುಂದಿರುವ ಗುರಿ" ಎಂದು ಟಿ ನಟರಾಜನ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ನಿರೀಕ್ಷೆ
ಸದ್ಯ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದರಿಂದ ಟೆಸ್ಟ್ ತಂಡದಲ್ಲಿ ನಟರಾಜನ್ ಅವಕಾಶ ಪಡೆದಿಲ್ಲ. ಆದರೆ ಸೀಮಿತ ಓವರ್‌ಗಳ ಸರಣಿಯಲ್ಲಿ ನಟರಾಜನ್ ಸ್ಥಾನವನ್ನು ಪಡೆಯುವುದು ಬಹುತೇಕ ನಿಶ್ಚಿತ. ಈ ಮೂಲಕ ಮೊದಲ ಬಾರಿಗೆ ನಟರಾಜನ್ ಭಾರತದ ನೆಲದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications