ಅಡಿಲೇಡ್, ನ.27: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭಗೊಂಡಿದೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಶುಕ್ರವಾರ ಶುರುವಾದ ಈ ಸಮರದಲ್ಲಿ ಭಾರತೀಯರೊಬ್ಬರು ಭಾಗವಹಿಸಿದ್ದಾರೆ.
ಅಡಿಲೇಡ್ ಓವಲ್ ಮೈದಾನದಲ್ಲಿ 27,000 ಜನ ವೀಕ್ಷಕರ ನಡುವೆ ನಡೆದಿರುವ ಈ ಪಂದ್ಯದಲ್ಲಿ ಅಂಪೈರ್ ಆಗಿ ಭಾರತದ ಸುಂದರಮ್ ರವಿ ಅವರು ಮೈದಾನದಲ್ಲಿದ್ದಾರೆ. ಇಂಗ್ಲೆಂಡಿನ ರಿಚರ್ಡ್ ಇಲ್ಲಿಂಗ್ವರ್ಥ್ ಅವರು ಮತ್ತೊಬ್ಬ ಅಂಪೈರ್ ಆಗಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ ಆಯ್ಕೆಯಾದ ರವಿ ಅವರಿಗೆ ಇದು 10ನೇ ಟೆಸ್ಟ್ ಪಂದ್ಯವಾಗಿದೆ. 2013ರ ಆಕ್ಟೋಬರ್ ನಲ್ಲಿ ಚಿಟ್ಟಗಾಂಗ್ ನಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಲ್ಲಿ ಅಂಪೈರ್ ಆಗಿ ಮೊದಲ ಬಾರಿಗೆ ಕಾರ್ಯನಿರ್ವಹಿಸಿದರು. 25ಏಕದಿನ ಪಂದ್ಯ ಹಾಗೂ 12 ಟಿ20 ಪಂದ್ಯಗಳಲ್ಲೂ ಅಂಪೈರ್ ಆಗಿದ್ದಾರೆ.
138 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 1970ರಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕಳೆದ ದಶಕದಲ್ಲಿ ಟ್ವೆಂಟಿ-20 ಮಾದರಿಯ ಪಂದ್ಯವನ್ನು ಪರಿಚಯಿಸಲಾಗಿದ್ದು, ಈ ಎರಡು ಮಾದರಿಯ ಕ್ರಿಕೆಟ್ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು.
ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡ 65.2 ಓವರ್ ಗಳಲ್ಲಿ 202 ಸ್ಕೋರಿಗೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನದ ಅಂತ್ಯಕ್ಕೆ 54/2 ಸ್ಕೋರ್ ಮಾಡಿದೆ.