ವಿದೇಶಿ ಲೀಗ್‌ನಲ್ಲಿ ಭಾರತೀಯರು ಆಡಬಹುದಾ? ಈ ತ್ಯಾಗ ಮಾಡಿದ್ರೆ ಮಾತ್ರ ಹೊರಡಿ ಎಂದ ಬಿಸಿಸಿಐ!

ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಪರಿಚಯವಾದ ಬೆನ್ನಲ್ಲೇ ಆರಂಭವಾದ ವಿಶ್ವದ ಪ್ರಪ್ರಥಮ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಹೌದು, 2007ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಭರ್ಜರಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಭಾರತದಲ್ಲಿ 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವುದರ ಮೂಲಕ ದೊಡ್ಡ ಮಟ್ಟದ ಪ್ರಯೋಗವೊಂದಕ್ಕೆ ಕೈಹಾಕಲಾಗಿತ್ತು.
ಪರಿಣಾಮ ಆ ಫ್ರಾಂಚೈಸಿ ಕ್ರಿಕೆಟ್ ಲೀಗ್ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆದುಕೊಂಡು, ಅಂದಿನಿಂದ ಪ್ರತಿ ವರ್ಷವೂ ಸಹ ಟೂರ್ನಿ ನಡೆಯುತ್ತಾ ಬಂದಿದೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಬೃಹತ್ ಯಶಸ್ಸು ಸಾಧಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್, ವೆಸ್ಟ್ ಇಂಡೀಸ್‌ನ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನದ ಪಾಕಿಸ್ತಾನ್ ಸೂಪರ್ ಲೀಗ್ ಹಾಗೂ ಇನ್ನಿತರ ದೇಶಗಳ ಹಲವಾರು ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಶುರುವಾದವು.
ಆ ಸಮಯಕ್ಕೆ ದಕ್ಷಿಣ ಆಫ್ರಿಕಾ ಕೂಡ ತನ್ನ ಫ್ರಾಂಚೈಸಿ ಟಿ ಟ್ವೆಂಟಿ ಲೀಗ್ ಆರಂಭಿಸಿತ್ತಾದರೂ ಹೆಚ್ಚು ವರ್ಷಗಳ ಕಾಲ ಅದನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಲಿಲ್ಲ. ಸದ್ಯ ಇದೀಗ ಕ್ರಿಕೆಟ್ ಸೌತ್ ಆಫ್ರಿಕಾ ಮತ್ತೊಂದು ಟಿ ಟ್ವೆಂಟಿ ಲೀಗ್ ಆರಂಭಿಸಲು ಮುಂದಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಕಂಪನಿಗಳೇ ಈ ದಕ್ಷಿಣ ಆಫ್ರಿಕಾದ ನೂತನ ಫ್ರಾಂಚೈಸಿ ಟಿ ಟ್ವೆಂಟಿ ಲೀಗ್ ಟೂರ್ನಿಯಲ್ಲಿ ತಂಡಗಳನ್ನು ಹೊಂದಿವೆ. ಹೀಗಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಭಾರತದ ಕೆಲ ಆಟಗಾರರು ಈ ದಕ್ಷಿಣ ಆಫ್ರಿಕಾದ ಫ್ರಾಂಚೈಸಿ ಲೀಗ್‌ನಲ್ಲೂ ಆಟಗಾರರಾಗಿ ಹಾಗೂ ಮಾರ್ಗದರ್ಶಕರಾಗಿ ಭಾಗವಹಿಸಲಿದ್ದಾರೆ ಎಂಬ ದೊಡ್ಡ ಮಟ್ಟದ ಸುದ್ದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹರಿದಾಡಿತ್ತು. ಹಾಗೂ ಈ ವಿಷಯದ ಕುರಿತಾಗಿ ಗೊಂದಲವು ಸಹ ದೊಡ್ಡ ಮಟ್ಟದಲ್ಲಿಯೇ ಇತ್ತು. ಸದ್ಯ ಈ ಕುರಿತಾಗಿ ಬಿಸಿಸಿಐನ ಅಧಿಕಾರಿಯೊಬ್ಬರು ಮಾಹಿತಿ ಬಿಚ್ಚಿಟ್ಟಿದ್ದು ಈ ಕೆಳಗಿನಂತೆ ಹೇಳಿಕೆ ನೀಡಿದ್ದಾರೆ.

ವಿದೇಶಿ ಲೀಗ್ ಆಡಲು ಈ ಕೆಲಸ ಮಾಡಲೇಬೇಕು
ದಕ್ಷಿಣ ಆಫ್ರಿಕಾದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿರುವ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಮೆಂಟರ್ ಆಗಿ ಆಡಲಿದ್ದಾರೆ ಹಾಗೂ ಇನ್ನೂ ಮುಂತಾದ ಕ್ರಿಕೆಟಿಗರು ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇತ್ತು. ಈ ಕುರಿತಾಗಿ ಇದೀಗ ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಇನ್ಸೈಡ್ ಸ್ಪೋರ್ಟ್ಸ್ ವೆಬ್ ತಾಣದೊಂದಿಗೆ ಮಾತನಾಡಿ "ದೇಸಿ ಕ್ರಿಕೆಟ್ ಆಡುವ ಆಟಗಾರರು ಸೇರಿದಂತೆ ಭಾರತದ ಯಾವುದೇ ಕ್ರಿಕೆಟಿಗ ಕೂಡ ವಿದೇಶಿ ಕ್ರಿಕೆಟ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಬೇಕೆಂದರೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿರಬೇಕು. ವಿದೇಶಿ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಿದ ಆಟಗಾರ ಬಿಸಿಸಿಐ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಕಡಿತಗೊಳಿಸಿಕೊಳ್ಳಲಿದ್ದಾನೆ" ಎಂದು ಸ್ಪಷ್ಟನೆ ನೀಡಿದ್ದಾರೆ.

ವಿದೇಶಿ ಲೀಗ್ ಆಡಲು ಐಪಿಎಲ್ ಕೂಡ ಬಿಡಬೇಕು!
ಈ ರೀತಿಯ ಸ್ಪಷ್ಟನೆ ನೀಡಿರುವ ಬಿಸಿಸಿಐ ಅಧಿಕಾರಿ ಹೇಳಿಕೆಯ ಪ್ರಕಾರ ವಿದೇಶಿ ಲೀಗ್ ಟೂರ್ನಿಗಳಲ್ಲಿ ಆಡಬಯಸುವ ಭಾರತದ ಯಾವುದೇ ಕ್ರಿಕೆಟಿಗ ಆದರೂ ಸಹ ಆತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಬೇಕು, ಈ ತ್ಯಾಗ ಮಾಡಿದರೆ ಮಾತ್ರ ವಿದೇಶಿ ಲೀಗ್ ಆಡಬಹುದಾಗಿದೆ. ಈ ಮೂಲಕ ಎಂಎಸ್ ಧೋನಿ ವಿದೇಶಿ ಕ್ರಿಕೆಟ್ ಲೀಗ್‌ನಲ್ಲಿ ಮೆಂಟರ್ ಆಗಬೇಕೆಂದರೆ ಐಪಿಎಲ್ ತ್ಯಜಿಸಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಐಪಿಎಲ್ ಎಂಬ ಬ್ರ್ಯಾಂಡ್ ಸಂರಕ್ಷಿಸಬೇಕು
ಇನ್ನೂ ಮುಂದುವರಿದು ಮಾತನಾಡಿದ ಬಿಸಿಸಿಐನ ಹಿರಿಯ ಅಧಿಕಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಎಂಬುದು ಬ್ರ್ಯಾಂಡ್ ಆಗಿದ್ದು ಇದನ್ನು ಬಿಸಿಸಿಐ ಸೃಷ್ಟಿಸಿದೆ ಹಾಗೂ ಈ ಬ್ರ್ಯಾಂಡ್ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications