
2023ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು ಒಂದು ತಿಂಗಳಿಗಿಂತಲೂ ಕಡಿಮೆ ಸಮಯವಿದೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಎಸ್ ಧೋನಿ ಗುರುವಾರ ಚೆನ್ನೈಗೆ ಆಗಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಧೋನಿ ಚೆನ್ನೈಗೆ ಬಂದಿಳಿದಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ.
41 ವರ್ಷದ ಧೋನಿ 2008ರಲ್ಲಿ ಮೊದಲ ಬಾಎಇಗೆ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಯಾದ ಬಳಿಕ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ನಂತರ ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕ ಎನಿಸಿಕೊಂಡಿದ್ದಾರೆ ಎಂಎಸ್ ಧೋನಿ.
2021ರ ಐಪಿಎಲ್ ಆವೃತ್ತಿಯ ಫೈನಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದಯ ಚಾಂಪಿಯನ್ ಪಟ್ಟಕ್ಕೇರಿದ್ದ ಚೆನ್ನೈ ಸೂಪರ್ ಕಿಂಗ್ಸ್ 2022ರ ಐಪಿಎಲ್ ಆವೃತ್ತಿಯಲ್ಲಿ ಮಾತ್ರ ನೀರಸ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೆಳಕ್ಕೆ ತಳ್ಳಲ್ಪಟ್ಟಿತ್ತು. ಆರಂಭದಲ್ಲಿಯೇ ರವೀಂದ್ರ ಜಡೇಜಾಗೆ ನಾಯಕತ್ವ ಒಪ್ಪಿಸಿದ್ದ ಧೋನಿ ಬಳಿಕ ಮತ್ತೆ ತಾವೇ ಮುನ್ನಡೆಸುವ ಸಂದರ್ಭವೂ ಬಂದಿತ್ತು. ಈ ಬಾರಿಯ ಐಪಿಎಲ್‌ನಲ್ಲಿಯೂ ಮಾಹಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಮಾರ್ಚ್ 31 ರಂದು ಸೆಣೆಸಾಡುವ ಮೂಲಕ ಸಿಎಸ್‌ಗೆ ಈ ಬಾರಿಯ ಆವೃತ್ತಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇನ್ನು ಈ ಬಾರಿ ಸಿಎಸ್‌ಕೆ ತನ್ನ ತವರಿನ ಪಂದ್ಯಗಳನ್ನು ಚೆಪಾಕ್ ಕ್ರೀಡಾಂಗಣದಲ್ಲಿಯೇ ಆಡಲಿದ್ದು ನಾಲ್ಕು ವರ್ಷಗಳ ಬಳಿಕ ಸಿಎಸ್‌ಕೆ ತವರಿನಲ್ಲಿ ಆಡಲು ಸಿದ್ಧವಾಗುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್: ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ