
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿಯೂ ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ತಂಡ 238 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಮೊಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೂಡ ಭಾರತ ಬೃಹತ್ ಗೆಲುವು ಸಾಧಿಸಿತ್ತು. ಈ ಮೂಲಕ ಭಾರತ 2-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ವಶಕ್ಕೆ ಪಡೆದುಕೊಂಡಿದೆ.
ಈ ಸರಣಿ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ದೀರ್ಘಕಾಲದ ಯೋಜನೆಯನ್ನು ಹಂಚಿಕೊಂಡಿದ್ದಾರೆ. ಭಾರತ ತಂಡ ಪ್ರಸ್ತುನ ನಡೆಯುತ್ತಿರಿವ ವಿಶ್ವ ಟೆಸ್ಟ್ ಚಾಂಫಿಯನ್‌ಶಿಪ್‌ನಲ್ಲಿ ಫೈನಲ್ ಹಂತಕ್ಕೇರುವುದು ನಮ್ಮ ಮುಂದಿರುವ ದೀರ್ಘ ಕಾಲದ ಗುರಿಯಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕಳೆದ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಫೈನಲ್ ಹಂತಕ್ಕೇರಿದ್ದು ಫೈನಲ್‌ನಲ್ಲಿ ಗೆಲುವು ಸಾಧಿಸಲು ವಿಫಲವಾಗಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇನ್ನು ಸರಣಿಯಲ್ಲಿ ಸಾಧಿಸಿದ ಸಕಾರಾತ್ಮಕ ಸಂಗತಿಗಳ ಬಗ್ಗೆ ರೋಹಿತ್ ಶರ್ಮಾ ಬೆಳಕು ಚೆಲ್ಲಿದರು. "ಟಿ20 ಸರಣಿಯಲ್ಲಿ ಕಂಡುಕೊಂಡಿದ್ದ ಅದ್ಭುತ ಫಾರ್ಮ್‌ಅನ್ನು ಶ್ರೇಯಸ್ ಐಯ್ಯರ್ ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಸಿದ್ದಾರೆ. ಅಲ್ಲಿ ಅವರನ್ನು ಒಮದು ಬಾರಿಯೂ ಔಟ್ ಮಾಡಲು ಸಾಧ್ಯವಾಗಿರಲಿಲ್ಲ. ಆ ಫಾರ್ಮ್‌ಅನ್ನು ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಸಿದರು. ಆತ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆಯಂತಾ ದೊಡ್ಡ ಆಟಗಾರರ ಸ್ಥಾನವನ್ನು ತುಂಬುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿತ್ತು. ಆತನಿಂದ ನಿಜಕ್ಕೂ ಉತ್ತಮವಾದ ಪ್ರದರ್ಶನ ಬಂದಿದೆ" ಎಂದಿದ್ದಾರೆ ರೋಹಿತ್ ಶರ್ಮಾ.
ಬೆಂಗಳೂರಿನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ ಭಾರತ ಭರ್ಜರಿ 238 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೂಡ ಭಾರತ ಭರ್ಜರಿ ಗೆಲುವು ಸಾಧಿಸಿತ್ತು.
ಬೌಲರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಭಾರತದ ಶ್ರೇಯಸ್ ಐಯ್ಯರ್ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕದ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಹಾಗೂ ಆರ್ ಅಶ್ವಿನ್ ಅಮೋಘ ಆಟವನ್ನು ಪ್ರದರ್ಶಿಸಿದ್ದಾರೆ. ಇನ್ನು ಶ್ರೀಲಂಕಾ ಪರವಾಗಿ ನಾಯಕ ದಿಮುತ್ ಕರುಣರತ್ನೆ ಭರ್ಜರಿ ಶತಕ ಸಿಡಿಸಿ ಏಕಾಂಗಿ ಹೋರಾಟವನ್ನು ನಡೆಸಿದರೂ ಶ್ರೀಲಂಕಾವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.