ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸಿದೆ. ಎಲ್ಲ ಆಟಗಾರರು ಸಂಪೂರ್ಣ ಫಿಟ್ ಹಾಗೂ ರೆಡಿಯಾಗಿದ್ದು, ಗಾಯಾಳು ಆಟಗಾರರ ಸ್ಥಾನವನ್ನು ತುಂಬಲು ಬ್ಯಾಕ್ ಅಪ್ ಪ್ಲೇಯರ್ ಗಳ ಸಂಖ್ಯೆಯೂ ಹೆಚ್ಚಿದೆ.
ತವರಿನಲ್ಲೇ ವಿಶ್ವಕಪ್ ನಡೆಯುವುದರಿಂದ ಆತಿಥೇಯ ತಂಡ ಹಾಟ್ ಫೆವರೀಟ್ ಎನ್ನೋದರಲ್ಲಿ ಎರಡು ಮಾತಿಲ್ಲ. ಆದರೆ, ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆದರೆ, ಈ ಸ್ಥಾನದ ಸದುಪಯೋಗ ಪಡಿಸಿಕೊಳ್ಳಲು ಚೆನ್ನೈ ಆಲ್ ರೌಂಡರ್ ಒಬ್ಬರು ಕಸರತ್ತು ನಡೆಸಿದ್ದಾರೆ.

ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುತ್ತಿರುವ ಸ್ಪಿನ್ನರ್ ಅಬ್ಬರಿಸುತ್ತಿದ್ದಾರೆ. ತವರಿನಲ್ಲಿ ನಡೆಯುವ ವಿಶ್ವಕಪ್ ಗೆ ತಾನು ಆಲ್ ರೌಡರ್ ಸ್ಥಾನವನ್ನು ತುಂಬಲು ಸಿದ್ಧರಿರುವುದಾಗಿ ಸಾರಿ ಸಾರಿ ಹೇಳುತ್ತಿದ್ದಾರೆ. ಅಕ್ಷರ್ ಪಟೇಲ್ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಟೀಮ್ ಇಂಡಿಯಾಕ್ಕೆ ಕೊಂಚ ಹಿನ್ನಡೆ ಆಗಿತ್ತು.
ಆದರೆ ಇದರ ಲಾಭ ಪಡೆಯಲು ಇನ್ನೊಬ್ಬ ಪ್ಲೇಯರ್ ತುದಿಗಾಲಿನಲ್ಲಿ ನಿಂತಿದ್ದಾನೆ. ಹೌದು.. ವಿಶ್ವಕಪ್ ನಲ್ಲಿ ಆಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕೇರಂ ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್ ಗೆ ತಂಡದಲ್ಲಿ ಸ್ಥಾನ ಸಿಗುವ ಆಸೆಗಳು ಚಿಗುರಿವೆ. ಅಸಲಿಗೆ ಅಶ್ವಿನ್ ಪ್ರತಿಭಾನ್ವಿತ ಬೌಲರ್ ಅನ್ನೋದರಲ್ಲಿ ಎರಡು ಮಾತು ಇಲ್ಲ. ಅದೂ ತವರಿನ ಪಿಚ್ ಗಳಲ್ಲಿ ಅಶ್ವಿನ್ ಬುಗರಿಯಂತೆ ಚೆಂಡನ್ನು ತಿರುಗಿಸುತ್ತಾರೆ.
ಅಶ್ವಿನ್ ಅವರ ಬೌಲಿಂಗ್ ಬಗ್ಗೆ ಇದ್ದ ಕೆಲವು ಪ್ರಶ್ನೆಗಳಿಗೆ, ಇಂದೋರ್ ನ ಹೋಳ್ಕರ್ ಅಂಗಳದ ಮೂಲಕ ಉತ್ತರ ನೀಡಿದ್ದಾರೆ. ಬ್ಯಾಟಿಂಗ್ ಟ್ರ್ಯಾಕ್ ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಕಟ್ಟಿ ಹಾಕಿದ ಅಶ್ವಿನ್ ಮೂರು ವಿಕೆಟ್ ಕಬಳಿಸಿದ್ದಾರೆ.
ಈ ಮೂಲಕ ತಾವು ಮೆಗಾ ಕ್ರಿಕೆಟ್ ಟೂರ್ನಿಗೆ ಸಿದ್ಧರಿರುವುದಾಗಿ ಸಾಬೀತು ಪಡೆಸಿದ್ದಾರೆ. ಭಾರತದಲ್ಲಿ ಅಶ್ವಿನ್ ಬೆಸ್ಟ್ ಬೌಲರ್ ಎಂಬುದು ಅವರ ಅಂಕಿ ಅಂಶಗಳಿಂದ ಧೃಡವಾಗುತ್ತದೆ. ಒಟ್ಟಾರೆ ಏಕದಿನ ಕ್ರಿಕೆಟ್ ನ 115 ಪಂದ್ಯಗಳಲ್ಲಿ ಅಶ್ವಿನ್ 155 ವಿಕೆಟ್ ಪಡೆದಿದ್ದಾರೆ. ಇವರ ಎಕನಾಮಿ ಸಹ 4.94 ಆಗಿದೆ.
ಇನ್ನು ಭಾರತದಲ್ಲಿ ಅಶ್ವಿನ್ ಅವರ ಪ್ರದರ್ಶನ ಅದ್ಭುತವಾಗಿದೆ. ತವರಿನಲ್ಲಿ ನಡೆದ ಪಂದ್ಯಗಳಲ್ಲಿ ಅಶ್ವಿನ್ ಬೆಂಕಿಯ ರೀತಿ ಚೆಂಡನ್ನು ಎಸೆಯುತ್ತಾರೆ. ಭಾರತದ ನೆಲದಲ್ಲಿ ಅಶ್ವಿನ್ 44 ಪಂದ್ಯಗಳಲ್ಲಿ 69 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ ಅಶ್ವಿನ್ ಎಕನಾಮಿ 5.07 ಅಗಿದೆ. ಇನ್ನು ಏಷ್ಯಾ ಖಂಡದಲ್ಲಿ ಅಶ್ವಿನ್ 59 ಪಂದ್ಯಗಳಲ್ಲಿ 94 ವಿಕೆಟ್ ಪಡೆದಿದ್ದಾರೆ.
ಅಕ್ಷರ ಪಟೇಲ್ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನ. ಹೀಗಾಗಿ ಇವರ ಸ್ಥಾನದ ಮೇಲೆ ಅಶ್ವಿನ್ ಕಣ್ಣಿಟ್ಟಿದ್ದಾರೆ. ಐಸಿಸಿ ನಿಯಮದ ಪ್ರಕಾರ ಆಲ್ ರೌಂಡರ್ ಸ್ಥಾನವನ್ನು, ಇನ್ನೊಬ್ಬ ಆಲ್ ರೌಂಡರ್ ತುಂಬ ಬೇಕಾಗುತ್ತದೆ. ಈ ನಿಯಮದ ಅನುಸಾರ ಅಶ್ವಿನ್ ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.