ದ್ರಾವಿಡ್ ಸೋಲಿನ ಭಯದೊಂದಿಗೆ ಆಡುತ್ತಿದ್ದರು, ಆದರೆ ವಿರಾಟ್ ಹಾಗಲ್ಲ ಎಂದ ಕೊಹ್ಲಿಯ ಗುರು!

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದ ವಿವಾದಕ್ಕೆ ಒಳಗಾಗಿರುವ ಕ್ರಿಕೆಟಿಗ ಎಂದರೆ ಅದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಹೌದು, ನಾಯಕತ್ವದ ಗೊಂದಲದ ಕುರಿತಾಗಿ ಇತ್ತೀಚಿಗಷ್ಟೆ ಮಾಧ್ಯಮಗೋಷ್ಠಿಯಲ್ಲಿ ಬಿಸಿಸಿಐ ಕುರಿತಾಗಿ ನೇರವಾದ ಹೇಳಿಕೆಗಳನ್ನು ನೀಡಿ ತನ್ನದೇನೂ ತಪ್ಪಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ವಿರಾಟ್ ಕೊಹ್ಲಿ ತನ್ನ ಹೇಳಿಕೆಗಳ ಕಾರಣದಿಂದಾಗಿ ದೊಡ್ಡಮಟ್ಟದ ಬೆಂಬಲ ಪಡೆದುಕೊಂಡರು ಮತ್ತು ಟೀಕೆಗಳನ್ನು ಕೂಡ ಎದುರಿಸಿದರು.
ಈ ವರ್ಷದ ಆರಂಭದಲ್ಲಿ ಭಾರತ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಈ ಮೂರೂ ಮಾದರಿಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ವರ್ಷದಂತ್ಯಕ್ಕೆ ಕೇವಲ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಮಾತ್ರ ತಮ್ಮಲ್ಲಿ ಹೊಂದಿದ್ದು ಇತ್ತೀಚೆಗಷ್ಟೇ ಮುಕ್ತಾಯವಾದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದರು ಹಾಗೂ ಬಿಸಿಸಿಐ ವಿರಾಟ್ ಕೊಹ್ಲಿಯವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದುಹಾಕಿತು. ಹೀಗೆ ಏಕಾಏಕಿ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ ಬಿಸಿಸಿಐ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಿಗೆ ಓರ್ವನೇ ನಾಯಕನಿರಬೇಕು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಕಾರಣವನ್ನೂ ಸಹ ತಿಳಿಸಿತ್ತು.
ಹೀಗೆ ನಾಯಕತ್ವದ ವಿಚಾರವಾಗಿ ಸಾಕಷ್ಟು ಟೀಕೆಗೊಳಗಾಗಿರುವ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಡಿಯಲ್ಲಿ ಬಲಿಷ್ಠ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನೆಲದಲ್ಲಿ ಸರಣಿಗಳನ್ನು ಜಯಗಳಿಸುವುದರ ಮೂಲಕ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಹಿಂದೆ ಯಾವ ವಿದೇಶಿ ನೆಲಗಳಲ್ಲಿ ಜಯಗಳಿಸಲು ಟೀಮ್ ಇಂಡಿಯಾ ಕಷ್ಟಪಡುತ್ತಿತ್ತೋ ಅದೇ ವಿದೇಶಿ ನೆಲದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ವಿಜಯಪತಾಕೆಯನ್ನು ಹಲವಾರು ಬಾರಿ ಹಾರಿಸಿತು. ಹೀಗೆ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ವಿದೇಶಿ ನೆಲಗಳಲ್ಲಿ ಜಯ ಸಾಧಿಸಿದ ನಂತರ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಮತ್ತು ಕ್ರೀಡಾ ಪಂಡಿತರು ಈ ಹಿಂದಿನ ನಾಯಕರ ನಾಯಕತ್ವವನ್ನು ವಿರಾಟ್ ಕೊಹ್ಲಿ ನಾಯಕತ್ವದ ಗುಣ ಮಟ್ಟದ ಜೊತೆ ಹೋಲಿಸಲು ಆರಂಭಿಸಿದರು. ಇದೇ ರೀತಿ ಇದೀಗ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಕೂಡ ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ಮಾತನಾಡಿದ್ದು ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೂ ರಾಹುಲ್ ದ್ರಾವಿಡ್ ಆಡುತ್ತಿದ್ದ ಕಾಲಘಟ್ಟದ ಟೀಮ್ ಇಂಡಿಯಾಗೂ ಇರುವ ವ್ಯತ್ಯಾಸವನ್ನು ತಿಳಿಸಲು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡುವುದರ ಮೂಲಕ ಯತ್ನಿಸಿದ್ದಾರೆ..

ದ್ರಾವಿಡ್ ಆಡುತ್ತಿದ್ದ ಸಮಯದಲ್ಲಿ ಟೀಮ್ ಇಂಡಿಯಾ ಸೋಲಬಾರದು ಎಂಬ ಉದ್ದೇಶದಿಂದ ಕಣಕ್ಕಿಳಿಯುತ್ತಿತ್ತು
ರಾಹುಲ್ ದ್ರಾವಿಡ್ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾ ಸೋಲಬಾರದು ಎಂಬ ಉದ್ದೇಶದಿಂದ ಕಣಕ್ಕಿಳಿಯುತ್ತಿತ್ತು. ಆದರೆ ವಿರಾಟ್ ಕೊಹ್ಲಿ ಅವರ ಪ್ರಮುಖ ಉದ್ದೇಶ ಗೆಲ್ಲಬೇಕು ಎಂಬುದು ಹೀಗಾಗಿಯೇ ಅವರು 5 ಬೌಲರ್‌ಗಳುಳ್ಳ ತಂಡದೊಂದಿಗೆ ವಿದೇಶಿ ನೆಲದಲ್ಲಿ ಕಣಕ್ಕಿಳಿಯುತ್ತಾರೆ ಎಂದು ರಾಜ್ ಕುಮಾರ್ ಶರ್ಮಾ ಹೇಳಿಕೆ ನೀಡಿದ್ದಾರೆ.

ಅಂತಿಮವಾಗಿ ಕೊಹ್ಲಿಯೇ ತಂಡವನ್ನು ಮುನ್ನಡೆಸಬೇಕು
ಇನ್ನು ರಾಹುಲ್ ದ್ರಾವಿಡ್ ವಿದೇಶಿ ನೆಲಗಳಲ್ಲಿ ಆಟಗಾರನಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದು, ಪ್ರಸ್ತುತ ಕೋಚ್ ಆಗಿ ತಂಡದ ಆಟಗಾರರಿಗೆ ಸಲಹೆ ಮತ್ತು ಕಣಕ್ಕಿಳಿಯಲು ಉತ್ತೇಜನವನ್ನು ತುಂಬಿ ಪ್ರೇರೇಪಿಸಬಹುದು. ಆದರೆ ಅಂತಿಮವಾಗಿ ಮೈದಾನದಲ್ಲಿ ತಂಡವನ್ನು ಮುನ್ನಡೆಸುವುದು ನಾಯಕ ಮಾತ್ರ ಎಂದು ರಾಜ್ ಕುಮಾರ್ ಶರ್ಮಾ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಇನ್ನು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಮೊದಲಿಗೆ ಹರಿಣಗಳ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಹರಿಣಗಳ ನೆಲದಲ್ಲಿ ತನ್ನ ಚೊಚ್ಚಲ ಟೆಸ್ಟ್ ಸರಣಿ ಜಯವನ್ನು ಸಾಧಿಸುವ ಯೋಜನೆಯಲ್ಲಿದೆ. ಕಳೆದ 12 ತಿಂಗಳಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿಯೂ ಕೂಡ ಜಯವನ್ನು ಸಾಧಿಸಿ ತನ್ನ ಕೆಟ್ಟ ದಾಖಲೆಯನ್ನು ಅಳಿಸಿ ಹಾಕುವ ಸಾಧ್ಯತೆಗಳು ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications