ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರದಿಂದ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಈ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ತುಂಬಾ ವಿಶೇಷವಾಗಿದೆ. 2011ರಲ್ಲಿ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಟೆಸ್ಟ್‌ಗೆ ಪಂದ್ಯಕ್ಕೂ, ಇಂಗ್ಲೆಂಡ್ ವಿರುದ್ಧ ಆಡುತ್ತಿರುವ ತಂಡಕ್ಕೂ ತುಲನೆ ಮಾಡುವ ಕಾರ್ಯ ನಡೆದಿದೆ. ಮೊದಲೆರಡು ಪಂದ್ಯಗಳಿಂದ ಹಿಂದೆ ಸರಿದಿರುವ ವಿರಾಟ್ ಕೊಹ್ಲಿಗೂ ಈ ಮೂಲಕ ವಿಶೇಷ ಸಂಬಂಧ ಕಲ್ಪಿಸಲಾಗಿದೆ.
2011 ರಲ್ಲಿ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡಿದ ನಂತರ ಇದೇ ಮೊದಲ ಬಾರಿಗೆ ಇಂತಹದೊಂದು ಪ್ರಸಂಗಕ್ಕೆ ಟೀಮ್ ಇಂಡಿಯಾ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಯಾರೂ ಭಾರತದ ಆಡುವ ತಂಡದಲ್ಲಿ ಸೇರ್ಪಡೆಯಾಗಲಿಲ್ಲ. ಈ ಕುತೂಹಲಕಾರಿ ಸಂಗತಿಯನ್ನು ನೋಡಿದರೆ ಈಗ ಟೀಮ್ ಇಂಡಿಯಾ ಹೊಸ ರೂಪ ಪಡೆದುಕೊಳ್ಳುತ್ತಿದೆಯೋ ಅಥವಾ ಹಳೆಯ ಆಟಗಾರರು ಮೈದಾನದಿಂದ ದೂರ ಸರಿಯುತ್ತಿದ್ದಾರೋ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿವೆ.

ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದರೂ, ಆದರೆ ವೈಯಕ್ತಿಕ ಕಾರಣಗಳಿಂದ ಅವರು ತಮ್ಮ ಹೆಸರನ್ನು ಹಿಂತೆಗೆದುಕೊಂಡರು.
ಇದರ ಹೊರತಾಗಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಬ್ಬರೂ ಆಟಗಾರರು ಕೆಲ ಸಮಯದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. 2023 ರಲ್ಲಿ ಜೂನ್ 7 ಮತ್ತು 11 ರ ನಡುವೆ ಆಸ್ಟ್ರೇಲಿಯಾ ವಿರುದ್ಧ ಪೂಜಾರ ಕೊನೆಯ ಟೆಸ್ಟ್ ಆಡಿದ್ದರು. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಫೈನಲ್ ಪಂದ್ಯವಾಗಿತ್ತು. ಇದಲ್ಲದೆ, ರಹಾನೆ ಅವರು ತಮ್ಮ ಕೊನೆಯ ಟೆಸ್ಟ್ ಅನ್ನು 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜುಲೈ 20-24 ರ ನಡುವೆ ಆಡಿದರು.
ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರರಲ್ಲಿ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಇದ್ದಾರೆ. ಆದರೆ ಅವರಿಬ್ಬರೂ ತಂಡದಿಂದ ಹೊರಗಿದ್ದಾರೆ. ಪೂಜಾರ ಭಾರತ ಪರ ಇದುವರೆಗೆ 103 ಟೆಸ್ಟ್‌ಗಳನ್ನು ಆಡಿದ್ದಾರೆ. ಇದಲ್ಲದೇ ರಹಾನೆ ಮೆನ್ ಇನ್ ಬ್ಲೂ ಪರ 85 ರೆಡ್ ಬಾಲ್ ಪಂದ್ಯಗಳನ್ನು ಆಡಿದ್ದಾರೆ.

ಪೂಜಾರ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿದ್ದು, ಮತ್ತೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಳ್ಳುವ ಕನಸು ಕಾಣುತ್ತಿದ್ದಾರೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಪೂಜಾರ ಅವರನ್ನು ಟೀಮ್ ಇಂಡಿಯಾದಿಂದ ಕೈ ಬಿಡಲಾಗಿತ್ತು. ಆದರೆ ಪೂಜಾರ ತಮ್ಮ ಫಾರ್ಮ್ ಮರಳಿ ಪಡೆಯಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ದೇಶೀಯ ಟೂರ್ನಿಗಳಲ್ಲಿ ಅಬ್ಬರದ ಆಟವನ್ನು ಆಡುತ್ತಿದ್ದಾರೆ.
ಸೌರಾಷ್ಟ್ರ ಪರ ಬ್ಯಾಟ್ ಮಾಡುವ ಪೂಜಾರ ಬ್ಯಾಟ್ ಈ ಬಾರಿಯ ರಣಜಿ ಟೂರ್ನಿಯಲ್ಲಿ ಅಬ್ಬರಿಸಿದೆ. ಈ ಸ್ಟಾರ್ ಪ್ಲೇಯರ್ ಈಗಾಗಲೇ ಒಂದು ದ್ವಿಶತಕ ಹಾಗೂ ಒಂದು ಶತಕ ಬಾರಿಸಿ ಆಯ್ಕೆದಾರರ ಗಮನವನ್ನು ತಮ್ಮತ್ತ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಇನ್ನು ತಂಡದ ಆಯ್ಕೆ ಮಾಡಲಾಗಿಲ್ಲ. ಹೀಗಾಗಿ ಪೂಜಾರ ತಂಡ ಸೇರಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಇನ್ನು ಇವರನ್ನು ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಕರೆಯುತ್ತಾರೆ.
ಟೀಮ್ ಇಂಡಿಯಾ ಸೇರಲು ಕಾತುರಾಗಿರುವ ಇನ್ನೊಬ್ಬ ಪ್ಲೇಯರ್ ಅಜಿಂಕ್ಯ ರಹಾನೆ. ಇವರ ಬ್ಯಾಟ್ ದೇಶೀಯ ಟೂರ್ನಿಗಳಲ್ಲಿ ಮೌನಕ್ಕೆ ಶರಣಾಗಿದ್ದು, ಚಿಂತೆ ಹೆಚ್ಚಿಸಿದೆ.