ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ನಡೆದುಕೊಂಡ ರೀತಿಗೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಎರಡು ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ಹೇರಲಾಗಿದೆ. ಅಲ್ಲದೆ ಪಂದ್ಯದ ಸಂಭಾವನೆಯ ಶೇಕಡಾ 75ರಷ್ಟು ದಂಡವನ್ನು ಕೂಡ ವಿಧಿಸಲಾಗಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಹರ್ಮನ್ ಪ್ರೀತ್ ಎರಡು ಪ್ರತ್ಯೇಕ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮವಾಗಿ ಈ ಶಿಕ್ಷೆಗೆ ಗುರಿಯಾಗಿದ್ದಾರೆ.
ಕಳೆದ ಶನಿವಾರ ಜುಲೈ 22ರಂದು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡು ಸರಣಿ 1-1 ಅಂತರದಲ್ಲಿ ಸಮಬಲಗೊಂಡಿತು. ಹೀಗಾಗಿ ಈ ಸರಣಿಯನ್ನು ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಹಂಚಿಕೊಂಡವು. ಆದರೆ ಈ ಕೊನೆಯ ಪಂದ್ಯದಲ್ಲಿ ನಡೆದ ಕೆಲವು ಘಟನೆಗಳು ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿವೆ.

ಸರಣಿಯ ನಿರ್ಣಾಯಕವೆನಿಸಿಕೊಂಡಿದ್ದ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 225 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ಆರಂಭದಲ್ಲಿ ಹಿನ್ನಡೆ ಕಂಡರೂ ಬಳಿಕ ಉತ್ತಮ ಪ್ರದರ್ಶನ ನೀಡಿ ಸುಲಭ ಗೆಲುವಿನತ್ತ ಹೆಜ್ಜೆಯಿಟ್ಟಿತ್ತು. ಉಪನಾಯಕಿ ಮಂಧಾನ ಹಾಗೂ ಹರ್ಲಿನ್ ಡಿಯೋಲ್ ಶತಕದ ಜೊತೆಯಾಟ ಭಾರತಕ್ಕೆ ಬಲ ತುಂಬಿತ್ತು.
ಸ್ಮೃತಿ ಮಂಧಾನ ಅರ್ಧ ಶತಕ ಸಿಡಿಸಿ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೊಂದು ಉತ್ತಮ ಜೊತೆಯಾಟ ನೀಡುವ ವಿಶ್ವಾಸದಲ್ಲಿದ್ದರು. ಆದರೆ 21 ಎಸೆತಗಳಲ್ಲಿ 14 ರನ್‌ಗಳಿಸಿದ ಹರ್ಮನ್ ನಹಿದಾ ಅಖ್ತರ್ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ಎಡವಿದರು. ಆ ಎಸೆತ ಹರ್ಮನ್ ಪ್ಯಾಡ್‌ಗೆ ಬಡಿದಿತ್ತು. ತಕ್ಷಣವೇ ಅಂಪೈರ್ ಔಟ್ ತೀರ್ಪು ನೀಡಿದರು.
ಈ ತೀರ್ಪು ಹರ್ಮನ್‌ಪ್ರೀತ್ ಕೌರ್ ಅವರನ್ನು ಕೆರಳಿಸಿತ್ತು. ಈ ಸಂದರ್ಭದಲ್ಲಿ ಆಕ್ರೋಶದಿಂದ ಹರ್ಮನ್ ಅಂಪೈರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ ವಿಕೆಟ್‌ಗೆ ಬ್ಯಾಟ್‌ನಿಂದ ಬಾರಿಸಿ ಮೈದಾನ ತೊರೆದರು. ಮೈದಾನ ತೊರೆಯುವ ಸಂದರ್ಭದಲ್ಲಿಯೂ ಹರ್ಮನ್ ಅಸಮಾಧಾನವನ್ನು ಮಾತುಗಳನ್ನು ವ್ಯಕ್ಯಪಡಿಸುತ್ತಿರುವುದು ಕ್ಯಾಮರಾದರಲ್ಲಿ ಸೆರೆಯಾಗಿತ್ತು.
ಅಲ್ಲದೆ ಪಂದ್ಯ ನಾಟಕೀಯವಾಗಿ ಟೈನಲ್ಲಿ ಅಂತ್ಯವಾದ ಬಳಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕಟು ಶಬ್ದಗಳಲ್ಲಿ ಬಾಂಗ್ಲಾದೇಶ ಮಂಡಳಿಯ ವಿರುದ್ಧ ಹರಿಹಾಯ್ದ ಹರ್ಮನ್ ಟ್ರೋಫಿಯನ್ನು ಪಡೆದ ಬಳಿಕ ಫೋಟೋಶೂಟ್‌ನಲ್ಲಿ ಅಂಫೈರ್‌ಗಳನ್ನು ಕೂಡ ವ್ಯಂಗ್ಯವಾಗಿ ಫೋಟೋಶೂಟ್‌ಗೆ ಆಹ್ವಾನಿಸಿದ್ದರು. ಇದಕ್ಕೆ ಬೇಸರಗೊಂಡ ಬಾಂಗ್ಲಾ ಆಟಗಾರ್ತಿಯರು ಫೋಟೋ ಶೂಟ್ ಮುಗಿಯುವ ಮುನ್ನವೇ ಅಲ್ಲಿಂದ ಹೊರನಡೆದು ಬೇಸರ ವ್ಯಕ್ತಪಡಿಸಿದ್ದರು!
ಈ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದಿದೆ. ಐಸಿಸಿ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ವಿಕೆಟ್ ಹಾನಿಗೊಳಿಸಿದ ಪ್ರಕರಣಕ್ಕೆ ಹಾಗೂ ಪಂದ್ಯದ ಅಧಿಕಾರಿಗಳಿಗೆ ನಿಂಧಿಸಿರುವುದಕ್ಕೆ ಎರಡು ಪ್ರತ್ಯೇಕವಾಗಿ ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ ಹರ್ಮನ್‌ಪ್ರೀತ್. ಈ ಕಾರಣದಿಂದಾಘಿ ಮುಂದಿನ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಡುವ ಅರ್ಹತೆ ಕಳೆದುಕೊಂಡಿದ್ದಾರೆ.