ಟೀಮ್ ಇಂಡಿಯಾ ಈ ವರ್ಷ ಅಮೋಘ ಪ್ರದರ್ಶನ ನೀಡಿದೆ. ಮೂರು ಫಾರ್ಮೆಟ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಭಾರತ ಅಭಿಮಾನಿಗಳನ್ನು ರಂಜಿಸಿದೆ. ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಮಬಲದ ಪ್ರದರ್ಶನ ನೀಡಿದ್ದ ಭಾರತ, ವರ್ಷದ ಆರಂಭದಲ್ಲಿ ನಡೆದಿದ್ದ ಏಕದಿನ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಈ ವರ್ಷ ನಡೆದಿದ್ದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿಯನ್ನು ಸಹ ಟೀಮ್ ಇಂಡಿಯಾ ಜಯಿಸಿದೆ. ಈ ಜಯದಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ತಮ್ಮ ಕಾಣಿಕೆ ನೀಡಿದ್ದಾರೆ. ಅಂತೆಯೇ, ಬೌಲರ್‌ಗಳ ಕೊಡುಗೆ ಸಹ ಅಪಾರ.
ಭಾರತದ ಪರ ಈ ವರ್ಷ ಸ್ಥಿರ ಪ್ರದರ್ಶನ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಕುಲ್‌ದೀಪ್ ಯಾದವ್ ಅವರಿಗೆ ಅಗ್ರಸ್ಥಾನ. ಇವರು ಮೂರು ಫಾರ್ಮೆಟ್ ಸೇರಿ ಒಟ್ಟು 25 ಪಂದ್ಯ ಆಡಿದ್ದು, 20.48ರ ಸರಾಸರಿಯಲ್ಲಿ 60 ವಿಕೆಟ್ ಪಡೆದು ಬೀಗಿದ್ದಾರೆ. ಈ ಮೂಲಕ ಕುಲ್‌ದೀಪ್ ಭಾರತದ ಪರ ಈ ವರ್ಷ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಜಾಕೋಬ್ ಡಫ್ಫಿ ಇದ್ದಾರೆ. ಇವರು ಈ ವರ್ಷ ಅಮೋಘ ಫಾರ್ಮ್‌ನಲ್ಲಿದ್ದು, ಆಡಿದ 35 ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಿವೀಸ್ ತಂಡದ ಮ್ಯಾಟ್ ಹೆನ್ರಿ (65 ವಿಕೆಟ್) ಇದ್ದು, ಜಿಂಬಾಬ್ವೆ ತಂಡದ ಬ್ಲೆಸ್ಸಿಂಗ್ ಮುಜರಬಾನಿ (65 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾದ ಮೊಹಮ್ಮದ್ ಸಿರಾಜ್ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಎರಡನೇ ಬೌಲರ್. ಇವರು ಆಡಿದ 13 ಪಂದ್ಯಗಳಲ್ಲಿ 45 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸೇರಿದ್ದಾರೆ. ಇವರು ಈ ವರ್ಷ ಆಡಿದ 20 ಪಂದ್ಯಗಳಲ್ಲಿ 43 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಟಿ20ಕ್ರಿಕೆಟ್‌ನ ನಂಬರ್ 1 ಬೌಲರ್ ವರುಣ್ ಚಕ್ರವರ್ತಿ ಸಹ ಈ ವರ್ಷ ಅಬ್ಬರಿಸಿದ್ದಾರೆ. ಇವರು ಆಡಿದ 23 ಪಂದ್ಯಗಳಲ್ಲಿ 42 ವಿಕೆಟ್ ಪಡೆದಿದ್ದಾರೆ.
ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 20 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿದ್ದಾರೆ. ಭರವಸೆಯ ಆಟಗಾರ ಅಕ್ಷರ್ ಪಟೇಲ್ ಸಹ 31 ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದು, ಕರ್ನಾಟಕದ ಸ್ಟಾರ್ ಆಟಗಾರ ಪ್ರಸಿದ್ಧ್ ಕೃಷ್ಣ ಆಡಿದ 8 ಪಂದ್ಯಗಳಲ್ಲಿ 28 ವಿಕೆಟ್ ಉರುಳಿಸಿದ್ದಾರೆ.

ಟೀಮ್ ಇಂಡಿಯಾದ ಪರ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಾ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಸಿರಾಜ್ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದು, ಹೊಸ ಭರವಸೆ ಮೂಡಿಸಿದ್ದಾರೆ. ಇನ್ನು ಪ್ರಸಿದ್ಧ್ ಕೃಷ್ಣಾ ಸಹ ಪ್ರಸಕ್ತ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.