ಟೀಮ್ ಇಂಡಿಯಾದಲ್ಲಿ ಸದ್ಯ ಹೊಸ ಯುಗ ಒಂದು ಆರಂಭವಾಗಿದೆ. ಈ ಸ್ಟಾರ್ ಆಟಗಾರರ ಸಂಸ್ಕೃತಿ ಕೊನೆಯಾದಂತೆ ಕಾಣುತ್ತಿದೆ. ಟೀಮ್ ಇಂಡಿಯಾದಲ್ಲಿ ಇರುವ ಅನುಭವಿ ಎಂದರೆ ಜಸ್ಪ್ರಿತ್ ಬುಮ್ರಾ. ಉಳಿದಂತೆ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿರುವ ಟೀಮ್ ಇಂಡಿಯಾದಲ್ಲಿ ಹಲವು ಯಂಗ್ ಪ್ಲೇಯರ್‌ಗ ದಂಡೇ ಇದೆ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಐಪಿಎಲ್ ಮುಗಿದ ಬಳಿಕ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾಕ್ಕೆ ಅನುಭವಿ ಆಟಗಾರರ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ಈ ವೇಳೆ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಸದ್ಯಕ್ಕಂತೂ ಮೆಲ್ನೋಟಕ್ಕಂತೂ ಶುಭಮನ್ ಗಿಲ್ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಇನ್ನು ಅಧಿಕೃತ ಮುದ್ರೆ ಬಿದ್ದಿಲ್ಲ.

ಟೀಮ್ ಇಂಡಿಯಾದ ನಾಯಕತ್ವದ ಮೇಲೆ ಈಗ ಹಲವು ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಶುಭಮನ್ ಗಿಲ್ ಅವರ ಮೇಲೆ ನೆಟ್ಟಿರಲಿವೆ. ಯಂಗ್ ಟೀಮ್ ಇಂಡಿಯಾವನ್ನು ಶುಭಮನ್‌ಗಿಲ್ ಮುನ್ನಡೆಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದಕ್ಕೆ ಇವರ ಅಂಕಿ ಅಂಶಗಳು ಬೇರೆಯದ್ದೇ ಕಥೆಯನ್ನು ಹೇಳುತ್ತಿವೆ. ಶುಭಮನ್ ಗಿಲ್ ಏಷ್ಯಾ ಖಂಡದಲ್ಲಿ ಕಿಂಗ್ ಆದ್ರೆ, ಬೇರೆ ಖಂಡಗಳಲ್ಲಿ ಇನ್ನು ಅಷ್ಟಾಗಿ ಅಬ್ಬರಿಸಿಲ್ಲ.
ಶುಭಮನ್ ಗಿಲ್ ಈ ವರೆಗೆ ತವರಿನಲ್ಲಿ 17 ಪಂದ್ಯಗಳನ್ನು ಆಡಿದ್ದು 42ರ ಸರಾಸರಿಯಲ್ಲಿ 4 ಶತಕ, 5 ಅರ್ಧಶತಕಗಳೊಂದಿಗೆ 1177 ರನ್ ಸಿಡಿಸಿದ್ದಾರೆ. ಇದೇ ಅಂಕಿ ಅಂಶಗಳು ವಿದೇಶದಲ್ಲಿ ಮಂಕಾಗುತ್ತವೆ. ಗಿಲ್ ವಿದೇಶದಲ್ಲಿ ಈ ವರೆಗೆ ಒಟ್ಟು 13 ಟೆಸ್ಟ್ ಪಂದ್ಯ ಆಡಿದ್ದು, 29ರ ಸರಾಸರಿಯಲ್ಲಿ 649 ರನ್ ಸಿಡಿಸಿದ್ದಾರೆ. ಈ ವೇಳೆ ಒಂದೇ ಒಂದು ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಸೇನಾ ರಾಷ್ಟ್ರಗಳಲ್ಲಿ ಗಿಲ್ ಬ್ಯಾಟ್ ಅಬ್ಬರಿಸಿಲ್ಲ.

ಕ್ಯಾಪ್ಟನ್ಸಿ ರೇಸ್‌ನಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಕೆಎಲ್ ರಾಹುಲ್. ಇವರು ಈಗಾಗಲೇ ತಮ್ಮಲ್ಲಿರುವ ಕ್ಷಮತೆಯನ್ನು ಜಗತ್ ಜಾಹೀರ ಮಾಡಿದ್ದಾರೆ. ಇವರು ತವರಿನಲ್ಲಿ 39ರ ಸರಾಸರಿಯಲ್ಲಿ 1149 ರನ್ ಕಲೆ ಹಾಕಿದ್ದಾರೆ. ಈ ವೇಳೆ ತವರಿನಲ್ಲಿ ಕೇವಲ 1 ಶತಕ ಸಿಡಿಸಿದ್ದಾರೆ. ವಿದೇಶದಲ್ಲಿ ರಾಹುಲ್ ಆರ್ಭಟ ಜೋರಾಗಿದೆ. ರಾಹುಲ್ 31ರ ಸರಾಸರಿಯಲ್ಲಿ 2108 ರನ್ ಸಿಡಿಸಿದ್ದು, ಈ ವೇಳೆ ಏಳು ಶತಕ ಹಾಗೂ ಏಳು ಅರ್ಧಶತಕ ಸಿಡಿಸಿದ್ದಾರೆ. ಇನ್ನು ನಾಯಕತ್ವದ ಮೇಲೆ ರಿಷಭ್ ಪಂತ್ ಸಹ ಕಣ್ಣು ನೆಟ್ಟಿದ್ದಾರೆ. ಇವರು ಸಹ ತವರಿನಾಚೆಗೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಈ ಮೂವರಲ್ಲಿ ಯಾರಿಗೆ ನಾಯಕ ಪಟ್ಟ ಸಿಗುತ್ತದೆ ಎಂಬ ಚರ್ಚೆಗಳು ಆರಂಭವಾಗಿದೆ.