2024ರ ಇಂಡಿಯನ್ ಪ್ರಿಮೀಯರ್ ಲೀಗ್‌ನ (ಐಪಿಎಲ್) 17ನೇ ಅವೃತ್ತಿಯಲ್ಲಿ ಏಪ್ರಿಲ್ 7ರ ಅಂತ್ಯದ ವೇಳೆಗೆ ಎರಡು ವಾರಗಳು ಕಳೆದಿದ್ದು, 21 ಪಂದ್ಯಗಳು ಪೂರ್ಣಗೊಂಡಿವೆ. 17 ದಿನಗಳ ಪಂದ್ಯಾವಳಿಯಲ್ಲಿ ಕ್ರಿಕೆಟ್ ಪ್ರೇಮಿಗಳು ರೋಚಕ ಪಂದ್ಯಗಳು, ನಂಬಲಾಗದ ಕ್ಯಾಚ್‌ಗಳು, ಕೊನೆಯ ಬಾಲ್ ಫಿನಿಶಿಂಗ್, ವಿರಾಟ್ ಕೊಹ್ಲಿಯ ದಾಖಲೆಯ ಶತಕ ಮತ್ತು ಒಂದೇ ಪಂದ್ಯದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಆಟವನ್ನು ನೋಡಿದ್ದಾರೆ.
ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಐಪಿಎಲ್‌ನ ಎಲ್ಲಾ ರಣರೋಚಕ ಪಂದ್ಯಗಳ ನಡುವೆ, ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆಲ್ಲುವುದನ್ನು ಮತ್ತು ಸೋಲುವುದನ್ನು ಕಂಡಿದ್ದಾರೆ. ಇದೀಗ ಅತ್ಯಂತ ಮುಖ್ಯವಾದ ವಿಷಯವೆಂದರೆ, ಭಾರತೀಯ ಆಟಗಾರರ ಫಾರ್ಮ್ ಹೇಗಿದೆ ಎಂಬುದನ್ನು ಯಾರೂ ಮರೆಯಬಾರದು.

ಏಕೆಂದರೆ, 2024ರ ಐಪಿಎಲ್ ಮುಗಿಯುತ್ತಿದ್ದಂತೆಯೇ 2024 ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ಜೂನ್ 2ರಂದು ಪ್ರಾರಂಭವಾಗಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಸಂಭಾವ್ಯ ಭಾರತ ತಂಡದ ಬಗ್ಗೆ ಯೋಚಿಸುತ್ತಿದ್ದಾರೆ. ಅದರಂತೆ, ಈವರೆಗಿನ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ 15 ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಿದ್ದೇವೆ.
2024ರ ಐಪಿಎಲ್‌ನಲ್ಲಿ ಇಲ್ಲಿಯವರೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅತ್ಯುತ್ತಮ ಟಾಪ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾಗಿ ಹೊರಹೊಮ್ಮಿದ್ದಾರೆ.
ವಿರಾಟ್ ಕೊಹ್ಲಿ ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಎರಡು ಅರ್ಧಶತಕ ಮತ್ತು ಒಂದು ಶತಕ ಒಳಗೊಂಡಂತೆ 105ರ ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಕೇವಲ 118 ರನ್ ಗಳಿಸಿದ್ದರೂ, 171ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಸ್ಟೈಲಿಶ್ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಒಂದು ಅರ್ಧಶತಕ ಸೇರಿದಂತೆ 217 ರನ್ ಗಳಿಸಿದ್ದಾರೆ. ಇನ್ನು ಶುಭ್ಮನ್ ಗಿಲ್ ಆರೋಗ್ಯಕರ 45ರ ಸರಾಸರಿ ಮತ್ತು 147ರ ಸ್ಟ್ರೈಕ್ ರೇಟ್‌ನಲ್ಲಿ 183 ರನ್ ಗಳಿಸಿದ್ದಾರೆ.
ರಿಯಾನ್ ಪರಾಗ್, ಶಿವಂ ದುಬೆ, ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ತಮ್ಮ ಸ್ಟ್ರೈಕಿಂಗ್ ರೇಟ್ ಮತ್ತು ಮ್ಯಾಚ್ ಫಿನಿಶಿಂಗ್ ಪ್ರದರ್ಶನದಿಂದ ಅತ್ಯುತ್ತಮವಾಗಿ ಪ್ರಭಾವ ಬೀರಿದ್ದಾರೆ.
ದುಬೆ, ಪರಾಗ್, ಸ್ಯಾಮ್ಸನ್ ಮತ್ತು ಪಂತ್ ಎಲ್ಲರೂ ಅವಳಿ ಅರ್ಧಶತಕಗಳನ್ನು ಗಳಿಸಿದ್ದಾರೆ ಮತ್ತು ಮಧ್ಯಮ ಕ್ರಮಾಂಕದಲ್ಲಿ (7-15 ಓವರ್) ಕೆಲವು ಅತ್ಯುತ್ತಮ ಸ್ಟ್ರೈಕ್ ರೇಟ್‌ಗಳನ್ನು ಹೊಂದಿದ್ದಾರೆ. ರಿಯಾನ್ ಪರಾಗ್ ಪ್ರಸ್ತುತ 185 ರನ್, ಶಿವಂ ದುಬೆ 148 ರನ್, ಸಂಜು ಸ್ಯಾಮ್ಸನ್ 178 ರನ್ ಮತ್ತು ರಿಷಭ್ ಪಂತ್ 153 ರನ್ ಗಳಿಸಿದ್ದಾರೆ.

ಸದ್ಯ ಮಟ್ಟಿಗೆ ಹೇಳುವುದಾದರೆ, ಹರ್‌ಪ್ರೀತ್ ಬ್ರಾರ್ ಮತ್ತು ಕೃನಾಲ್ ಪಾಂಡ್ಯ ಎರಡು ಪ್ರಮುಖ ಮುಂಚೂಣಿ ಆಯ್ಕೆಗಳಾಗಿವೆ. ಕೃನಾಲ್ ಪಾಂಡ್ಯ ಮತ್ತು ಹರ್‌ಪ್ರೀತ್ ಬ್ರಾರ್ ಕ್ರಮವಾಗಿ 24 ಮತ್ತು 15ರ ಸರಾಸರಿಯಲ್ಲಿ ತಲಾ ಮೂರು ವಿಕೆಟ್‌ಗಳನ್ನು ಹೊಂದಿದ್ದಾರೆ. ಆದರೆ ಪ್ರತಿ ಓವರ್‌ಗೆ 6ಕ್ಕಿಂತ ಕಡಿಮೆ ರನ್ ನೀಡಿದ್ದಾರೆ.
ಇದುವರೆಗೆ ಐವರು ಬೌಲರ್‌ಗಳು ಅತ್ಯುತ್ತಮ ಪ್ರದರ್ಶ ನೀಡಿದ್ದಾರೆ. ಯುಜ್ವೇಂದ್ರ ಚಹಾಲ್ ಪ್ರಮುಖ ಸ್ಪಿನ್ನರ್ ಆಗಿದ್ದರೆ, ಜಸ್ಪ್ರೀತ್ ಬುಮ್ರಾ, ಮೋಹಿತ್ ಶರ್ಮಾ, ಖಲೀಲ್ ಅಹ್ಮದ್ ಮತ್ತು ಮಯಾಂಕ್ ಯಾದವ್ ವೇಗದ ಬೌಲಿಂಗ್ ಆಯ್ಕೆಯಾಗಿದ್ದಾರೆ.
ಪ್ರತಿ ಹಂತದಲ್ಲೂ ಬೌಲಿಂಗ್ ಮಾಡುವ ಜಸ್ಪ್ರೀತ್ ಬುಮ್ರಾ ಅವರ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಖಲೀಲ್ ಅಹ್ಮದ್ ಉತ್ತಮ ಹೊಸ ಬಾಲ್ ಬೌಲರ್ ಮತ್ತು ಎಡಗೈ ಪ್ರಯೋಜನ ನೀಡುತ್ತಾರೆ.
ಅತಿ ವೇಗದ ಬೌಲರ್ ಮಾಯಾಂಕ್ ಯಾದವ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಸಬಹುದು. ಇನ್ನು ಅನುಭವಿ ಮೋಹಿತ್ ಡೆತ್ ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಉಪಯುಕ್ತ ಕಾಣಿಕೆ ನೀಡಬಹುದು.

2024ರ ಟಿ20 ವಿಶ್ವಕಪ್ ಸಂಭಾವ್ಯ ಭಾರತ ತಂಡ (2024ರ ಐಪಿಎಲ್ 21 ಪಂದ್ಯಗಳ ಬಳಿಕ)
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹರ್‌ಪ್ರೀತ್ ಬ್ರಾರ್, ಕೃನಾಲ್ ಪಾಂಡ್ಯ, ಖಲೀಲ್ ಅಹ್ಮದ್, ಯುಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಮೋಹಿತ್ ಶರ್ಮಾ, ಮಯಾಂಕ್ ಯಾದವ್.