ಭಾರತ ಗುವಾಹಟಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಸೋತಿದೆ. ಈ ಮೂಲಕ ತವರಿನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನ್ನು ಅನುಭವಿಸಿದೆ. ಈ ಸೋಲು ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಾಗಿದ್ದರೆ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಸೋಲಲು ಏನು ಕಾರಣ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಅನುಭವಿಗಳ ಅನುಪಸ್ಥಿತಿಯ ಲಾಭ ಪಡೆದುಕೊಳ್ಳುವಲ್ಲಿ ವಿಫಲರಾಗಿರುವ ಯುವಕರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟೀಮ್ ಇಂಡಿಯಾದ ಯುವ ಆಟಗಾರರು ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗದ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಎಡವಿದ್ದಾರೆ. ಟೀಮ್ ಇಂಡಿಯಾ ಸೋಲಿಗೆ ಕಾರಣ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ "ಎ" ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಧ್ರುವ್ ಜುರೇಲ್ ಅವರಿಗೆ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶವನ್ನು ಕಲ್ಪಿಸಲಾಯಿತು. ಆದರೆ ಜುರೇಲ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ವಿಫಲರಾದರು. ಜುರೇಲ್ ಆಡಿದ 2 ಟೆಸ್ಟ್ ಪಂದ್ಯಗಳಲ್ಲಿ 7.25ರ ಸರಾಸರಿಯಲ್ಲಿ 25 ರನ್ ಕಲೆ ಹಾಕಿ ನಿರಾಸೆ ಅನುಭವಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ತವರಿನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಟೆಸ್ಟ್ ಸ್ಪಷಲಿಸ್ಟ್ ರೀತಿಯಲ್ಲಿ ಕಾಣಿಸಿಕೊಳ್ಳುವ ರಾಹುಲ್, ಆಡಿದ 4 ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಇವರು ಕೇವಲ 17ರ ಸರಾಸರಿಯಲ್ಲಿ 39 ರನ್ ಸಿಡಿಸಿದ್ದಾರೆ.

ಟೀಮ್ ಇಂಡಿಯಾದ ನಾಯಕ ರಿಷಭ್ ಪಂತ್ ಪ್ರಸಕ್ತ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಗಾಯದ ಬಳಿಕ ಟೆಸ್ಟ್ ಸರಣಿಗೆ ಕಂ ಬ್ಯಾಕ್ ಮಾಡಿರುವ ರಿಷಭ್ ಪಂತ್ ಆಡಿರುವ 4 ಇನಿಂಗ್ಸ್‌ಗಳಲ್ಲಿ 12.25 ಸರಾಸರಿಯಲ್ಲಿ 49 ರನ್ ಕಲೆ ಹಾಕಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಸಹ ತಮಗೆ ತಂಡ ನೀಡಿರುವ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಇವರಿಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ನೀಡಲಾಗಿತ್ತು. ಆದರೆ ಇವರು ಕೇವಲ 10 ರನ್ ಬಾರಿಸಿ ವೈಫಲ್ಯ ಅನುಭವಿಸಿದ್ದಾರೆ.
ಈ ಮೇಲಿನ ಆಟಗಾರರ ಜೊತೆಗೆ ತಂಡದಲ್ಲಿ ಸಂಘಟಿತ ಆಟದ ಕೊರತೆ ಎದ್ದು ಕಂಡಿದೆ. ದಕ್ಷಿಣ ಆಫ್ರಿಕಾದ ಬೌಲರ್‌ಗಳು ಹಾಗೂ ಬ್ಯಾಟರ್‌ಗಳು ಆಡಿದ ರೀತಿಯಲ್ಲಿ ಟೀಮ್ ಇಂಡಿಯಾ ಆಡದೇ ಇರುವುದು ಸೋಲಿಗೆ ಪ್ರಮುಖ ಕಾರಣವಾಗಿದೆ. ಇಷ್ಟು ದಿನಗಳ ಕಾಲ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಕಾಟ ನೀಡುತ್ತಿದ್ದ ಟೀಮ್ ಇಂಡಿಯಾ, ಈ ಬಾರಿ ದಕ್ಷಿಣ ಆಫ್ರಿಕಾ ತೋಡಿದ ಸ್ಪಿನ್ ಖೆಡ್ಡಾಗೆ ಬಲಿಯಾಗಿದೆ. ಪರಿಣಾಮ ತವರಿನಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲು ಕಂಡಿದೆ.