ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಇದೆ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಳೆದು ತೂಗಿ ಬಿಸಿಸಿಐ ಆಯ್ಕೆ ಸಮಿತಿ ಆಟಗಾರರಿಗೆ ಮಣೆ ಹಾಕಿದೆ. ಯುವ ಆಟಗಾರರ ತಂಡ ವಿಶ್ವ ಚಾಂಪಿಯನ್‌ರಿಗೆ ಸವಾಲು ಎಸೆಯಲು ಸಿದ್ಧವಾಗಿದೆ. ಆದರೆ ಈ ಮಧ್ಯೆದಲ್ಲಿ ಬೆಂಗಳೂರಿನಿಂದ ಬರುತ್ತಿರುವ ಸುದ್ದಿಯೊಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೆಚ್ಚಿಸಿದೆ. ಹಾಗಿದ್ದರೆ ಆ ಪ್ಲೇಯರ್ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಚೇತೇಶ್ವರ್ ಪೂಜಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ಮೂರನೇ ಸ್ಥಾನಕ್ಕೆ ನ್ಯಾಯ ಒದಗಿಸಿದ್ದ ಪ್ಲೇಯರ್. ಈ ಸ್ಥಾನದಲ್ಲಿ ಕೆಲ ಕಾಲ ಶುಭಮನ್ ಗಿಲ್ ಬ್ಯಾಟ್ ಮಾಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ ಅವರು ಹಠಾತನೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಸರಣಿಗೆ ವಿದಾಯ ಹೇಳಿದ್ದರಿಂದ ತೆರವಾದ ನಾಲ್ಕನೇ ಸ್ಥಾನದಲ್ಲಿ ಇವರು ಬ್ಯಾಟ್ ಮಾಡಲು ಆರಂಭಿಸಿದರು. ಹೀಗಾಗಿ ಮೂರನೇ ಸ್ಥಾನಕ್ಕಾಗಿ ಹುಡುಕಾಟ ನಡೆಯಿತು.

ಇಂಗ್ಲೆಂಡ್ ಪ್ರವಾಸದಲ್ಲಿ ಈ ಸ್ಥಾನಕ್ಕೆ ಒಬ್ಬ ಉತ್ತಮ ಉತ್ತರಾಧಿಕಾರಿ ನೇಮಕವಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದ ಕರ್ನಾಟಕದ ಸ್ಟಾರ್ ಪ್ಲೇಯರ್ ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಬಳಿಕ ಈ ಸ್ಥಾನದಲ್ಲಿ ಐಪಿಎಲ್‌ನಲ್ಲಿ ಮಿಂಚು ಹರಿಸಿದ್ದ ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಲಾಯಿತು. ಅವರು ಸಹ ಅಷ್ಟೇನು ಸ್ಥಿರ ಪ್ರದರ್ಶನ ನೀಡಲಿಲ್ಲ. ಆದರೂ ಇವರನ್ನು ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಲಾಯಿತು. ತವರಿನ ಪಿಚ್‌ಗಳ ಲಾಭ ಪಡೆದು ಬ್ಯಾಟ್ ಮಾಡುವಲ್ಲಿ ಸಾಯಿ ವಿಫಲರಾದರು.
ಸಾಯಿ ವಿಂಡೀಸ್ ವಿರುದ್ಧ ಅರ್ಧಶತಕವನ್ನು ಬಾರಿಸಿದ್ದರು. ಆದರೆ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದ್ದರು. ಆದರೆ ಇವರ ಮೇಲೆ ಭರವಸೆ ಇಟ್ಟ ಬಿಸಿಸಿಐ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನವನ್ನು ನೀಡಿತು. ಅಲ್ಲದೆ ಭಾರತ "ಎ" ಪರ ಅಭ್ಯಾಸ ಪಂದ್ಯವನ್ನು ಆಡುವ ಚಾನ್ಸ್ ಸಹ ಸಾಯಿ ಸುದರ್ಶನ್‌ಗೆ ಸಿಕ್ಕಿತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಾಯಿ ಸುದರ್ಶನ್ ಸಂಪೂರ್ಣ ವಿಫಲರಾದರು. ಆಡಿದ ಎರಡೂ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇವರು ಸ್ಥಿರ ಪ್ರದರ್ಶನ ನೀಡಲಿಲ್ಲ.

ಬೆಂಗಳೂರಿನಲ್ಲಿ ಸಾಯಿ ಸುದರ್ಶನ್ ನೀಡುತ್ತಿದ್ದ ಪ್ರದರ್ಶನ ನಿಶ್ಚಿತವಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಖದ ಮೇಲೆ ಚಿಂತೆಯ ಗೆರೆಗಳನ್ನು ಮೂಡುವಂತೆ ಮಾಡಿದೆ. ಸಾಯಿ ಅವರು ರನ್ ಬರ ಅನುಭವಿಸುತ್ತಿರುವುದು ಮೂರನೇ ಕ್ರಮಾಂಕದಲ್ಲಿ ಮತ್ತೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ.