ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ಭಾರತ ತಂಡದ ವೇಗದ ಬೌಲರ್‍ಗಳಾದ ಅರ್ಷದೀಪ್ ಸಿಂಗ್, ಆಕಾಶ್ ದೀಪ್ ಈಗಾಗಲೇ ಗಾಯಕ್ಕೆ ತುತ್ತಾಗಿದ್ದಾರೆ. ಈ ಸಾಲಿಗೆ ಮತ್ತೊಬ್ಬ ಆಟಗಾರ ಸೇರ್ಪಡೆ ಆಗಿದ್ದಾನೆ. ಅ ಪ್ಲೇಯರ್ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಇವರು ಮುಂಬರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಮೊಣಕಾಲಿನ ಗಾಯದಿಂದಾಗಿ, ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಆಡುವುದು ಕಷ್ಟ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇವರು ಮುಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದರೆ ಯಾರಿಗೆ ಅವಕಾಶ ಲಭಿಸುತ್ತದೆ ಎಂಬ ಪ್ರಶ್ನೆಗಳು ಸಹ ಎದ್ದಿವೆ.

ಮ್ಯಾಂಚೆಸ್ಟರ್ ಟೆಸ್ಟ್‌ಗೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ಚೇತರಿಸಿಕೊಳ್ಳದೇ ಇದ್ದರೆ, ಯಾರು ತಂಡ ಸೇರಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾ ಶಾರ್ದೂಲ್ ಠಾಕೂರ್ ಇಲ್ಲವೇ ಪ್ರಸಿದ್ಧ್ ಕೃಷ್ಣಾಗೆ ತಂಡದಲ್ಲಿ ಸ್ಥಾನ ನೀಡಬಹುದು. ತಂಡದಲ್ಲಿ ಗಾಯಾಳುಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿರುವುದರಿಂದ ಚಿಂತೆ ಹೆಚ್ಚಿದೆ. ಈಗಾಗಲೇ ತಂಡವನ್ನು ಸೇರಿರುವ ಅಂಶುಲ್ ಕಂಬೋಜ್ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಸೇರಿಕೊಂಡಿದ್ದು, ಇವರು ಪಂದ್ಯ ಆಡುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.
ಪ್ರಸಕ್ತ ಸರಣಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡದ ಪರ ಚೇತೋಹಾರಿ ಪ್ರದರ್ಶನ ನೀಡಿರಲಿಲ್ಲ. ಇವರಿಗೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ಇವರು ಈ ಟೆಸ್ಟ್ ಪಂದ್ಯದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಲಿಲ್ಲ. ಇವರು ಮೂರನೇ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ್ದರು.

ಮ್ಯಾಂಚೆಸ್ಟರ್ ಮೈದಾನ ವೇಗದ ಬೌಲರ್‌ಗಳಿಗೆ ಸಹಾಯ ನೀಡಬಹುದಾಗಿದೆ. ಈ ಪರಿಸ್ಥಿತಿಯಲ್ಲಿ ಟೀಮ ಮ್ಯಾನೇಜ್ಮೆಂಟ್ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಪ್ರಸಿದ್ಧ್ ಕೃಷ್ಣಾ ಅವರಿಗೆ ಸ್ಥಾನ ನೀಡಬಹುದು ಎಂಬ ಲೆಕ್ಕಾಚಾರ ಆರಂಭವಾಗಿವೆ. ಇನ್ನು ಪ್ರಸಿದ್ಧ್ ಕೃಷ್ಣಾ ಅವರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಇವರು ಆಂಡರ್ಸನ್, ತೆಂಡುಲ್ಕರ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರು. ಇವರು 2 ಟೆಸ್ಟ್ ಪಂದ್ಯಗಳಲ್ಲಿ 6 ವಿಕೆಟ್ ಪಡೆದರು. ಆದರೆ ಇವರು ರನ್‌ಗಳನ್ನು ಹೆಚ್ಚಾಗಿ ಕೈ ಬಿಟ್ಟು ನಿರಾಸೆ ಅನುಭವಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.