ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂನ್ 20 ರಿಂದ ಆರಂಭವಾಗಲಿದೆ. ಐದು ಪಂದ್ಯಗಳ ಸರಣಿಯನ್ನು ಆಡಲು ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾದ ಸಂಯೋಜನೆ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಮನೆ ಮಾಡಿದೆ. ಅನುಭವಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಲಿವೆ.
ಹಲವು ಯುವ ಆಟಗಾರರು ಈ ಸರಣಿಯಲ್ಲಿ ಆಡುವ ಅವಕಾಶ ಸಿಗಬಹುದು ಎಂಬ ಕನಸು ಕಾಣುತ್ತಿದ್ದಾರೆ. ಇವರ ಅನುಭವಿಗಳ ಅನುಪಸ್ಥಿತಿಯಲ್ಲಿ ಯಾವ ಯುವ ಆಟಗಾರರಿಗೆ ಅವಕಾಶ ಸಿಗಬಹದು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೆ ಯಾವ ಆಲ್‌ರೌಂಡರ್‌ಗೆ ನಾಯಕ ಶುಭಮನ್ ಗಿಲ್ ಮಣೆ ಹಾಕುತ್ತಾರೆ? ಯಾವ ಬೌಲರ್‌ಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಲಭಿಸುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ.

ಆರಂಭಿಕರಾಗಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಜೊತೆಗೆ ಕನ್ನಡಿಗ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಇವರು ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದರು. ರಾಹುಲ್, ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಭರವಸೆಯ ಬ್ಯಾಟರ್. ಇವರ ಅನುಭವ ತಂಡಕ್ಕೆ ಅಗತ್ಯವಾಗಿದೆ. ಇನ್ನು ದೇಶೀಯ ಟೂರ್ನಿಯಲ್ಲಿ ಸತತ ಸ್ಥಿರ ಪ್ರದರ್ಶನ ನೀಡಿ, ಭಾರತ "ಎ" ತಂಡದಲ್ಲೂ ಚೇತೋಹಾರಿ ಪ್ರದರ್ಶನ ನೀಡಿದ್ದ ತಮಿಳುನಾಡಿನ ಅಭಿಮನ್ಯು ಈಶ್ವರನ್‌ಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.
ಯಾರಿಗೆ ಸಿಗುತ್ತೆ ಅವಕಾಶ?
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಶುಭ್‌ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ದೇಶೀಯ ಟೂರ್ನಿಗಳಲ್ಲಿ ರನ್ ಮಹಲ್ ಕಟ್ಟಿ ಆಯ್ಕೆದಾರರ ಚಿತ್ತವನ್ನು ಕದ್ದಿದ್ದ ಕರ್ನಾಟಕದ ಕರುಣ್ ನಾಯರ್‌ಗೂ ಜಾಕ್‌ಪಾಟ್ ಹೊಡೆಯಬಹುದು. ಇವರು 8 ವರ್ಷದ ಬಳಿಕ ಬಿಳಿ ಜೆರ್ಸಿ ತೊಟ್ಟು ಟೀಮ್ ಇಂಡಿಯಾದ ಪರ ಆಡುವುದನ್ನು ಅವರ ಅಭಿಮಾನಿಗಳು ನೋಡಬಹುದಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಕಾಣಿಸಿಕೊಂಡರೆ, ಆಲ್‌ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ನುರಿತ ಸ್ಪಿನ್ ಬೌಲರ್ ರೂಪದಲ್ಲಿ ಕುಲ್‌ದೀಪ್ ಯಾದವ್ ಸ್ಥಾನ ಪಡೆಯಬಹುದಾಗಿದೆ. ಇನ್ನು ವೇಗದ ಬೌಲಿಂಗ್ ನೊಗವನ್ನು ಜಸ್ಪ್ರಿತ್ ಬುಮ್ರಾ ಮುನ್ನಡೆಸಲಿದ್ದರೆ, ಮೊಹಮ್ಮದ್ ಸಿರಾಜ್ ಇವರಿಗೆ ಉತ್ತಮ ಸಾಥ್ ನೀಡಲಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ವೇಗದ ಬೌಲರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ಟೀಮ್ ಇಂಡಿಯಾ ಮೂರೂ ನುರಿತ ವೇಗದ ಬೌಲರ್, ಒಬ್ಬ ಆಲ್‌ರೌಂಡರ್, ಒಬ್ಬ ಸ್ಪಿನ್ ಬೌಲರ್‌ಗೆ ಆದ್ಯತೆ ನೀಡುವ ಸಾಧ್ಯತೆ ದಟ್ಟವಾಗಿದೆ.