ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರು ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್‌ಗಿಂತ ಉತ್ತಮ ವೇಗದ ಬೌಲರ್ ಎಂದು ಭಾರತದ ಅನುಭವಿ ವೇಗಿ ಇಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಈವರೆಗೆ 180 ಪಂದ್ಯಗಳಿಂದ 26.11ರ ಸರಾಸರಿಯಲ್ಲಿ 686 ವಿಕೆಟ್ ಪಡೆದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿದ್ದಾರೆ. ಮತ್ತೊಂದೆಡೆ, ಜಹೀರ್ ಖಾನ್ 92 ಟೆಸ್ಟ್ ಪಂದ್ಯಗಳಲ್ಲಿ 32.94ರ ಸರಾಸರಿಯಲ್ಲಿ 311 ವಿಕೆಟ್‌ಗಳೊಂದಿಗೆ ವೃತ್ತಿಜೀವನವನ್ನು ಮುಗಿಸಿದ್ದಾರೆ.

ಇಶಾಂತ್ ಶರ್ಮಾ ಪ್ರಕಾರ, ಜೇಮ್ಸ್ ಆಂಡರ್ಸನ್ ಅವರ ಬೌಲಿಂಗ್ ಶೈಲಿ ಮತ್ತು ವಿಧಾನವು ಅವರು ಇಂಗ್ಲೆಂಡ್‌ನ ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವುದರಿಂದ ಗಮನಾರ್ಹವಾಗಿ ವಿಭಿನ್ನವಾಗಿಯೇ ಇರುತ್ತದೆ. ಒಂದು ವೇಳೆ ಜೇಮ್ಸ್ ಆಂಡರ್ಸನ್ ಅವರು ಭಾರತದಲ್ಲಿ ಆಡಿದ್ದರೆ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಯಶಸ್ವಿಯಾಗುತ್ತಿರಲಿಲ್ಲ ಎಂದು ತಿಳಿಸಿದರು.
"ಜೇಮ್ಸ್ ಆಂಡರ್ಸನ್ ಅವರ ಬೌಲಿಂಗ್ ಶೈಲಿ ಮತ್ತು ವಿಧಾನವು ವಿಭಿನ್ನವಾಗಿದೆ. ಇಂಗ್ಲೆಂಡ್‌ನಲ್ಲಿ ವಿವಿಧ ಪರಿಸ್ಥಿತಿಗಳಲ್ಲಿ ಆಡುತ್ತಾರೆ. ಬಹುಶಃ ಅವರು ಭಾರತದಲ್ಲಿ ಆಡಿದ್ದರೆ, ಯಶಸ್ವಿಯಾಗುತ್ತಿರಲಿಲ್ಲ. ಜೇಮ್ಸ್ ಆಂಡರ್ಸನ್‌ಗಿಂತ ಜಹೀರ್ ಖಾನ್ ಉತ್ತಮ," ಎಂದು ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಇಶಾಂತ್ ಶರ್ಮಾ ಹೇಳಿದ್ದಾರೆ.

ಇಂಗ್ಲೆಂಡ್ ವೇಗಿ ಭಾರತದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 29.32ರ ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಗಮನಾರ್ಹವೆಂದರೆ, 40 ವರ್ಷದ ಜೇಮ್ಸ್ ಆಂಡರ್ಸನ್ ಭಾರತದಲ್ಲಿ ಇನ್ನೂ ಐದು ವಿಕೆಟ್‌ಗಳ ಸಾಧನೆಯನ್ನು ಮಾಡಿಲ್ಲ. ಇದೇ ವೇಳೆ, ಜಹೀರ್ ಖಾನ್ ಇಂಗ್ಲೆಂಡ್‌ನಲ್ಲಿ ಎಂಟು ಪಂದ್ಯಗಳನ್ನು ಆಡಿದ್ದು, 27.96ರ ಸರಾಸರಿಯಲ್ಲಿ 31 ವಿಕೆಟ್‌ಗಳನ್ನು ಪಡೆದರು ಮತ್ತು ಒಂದು ಬಾರಿ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಮಾಜಿ ವೇಗಿ ಜಹೀರ್ ಖಾನ್ ಬಗ್ಗೆ ಮಾತನಾಡುತ್ತಾ, 2014ರಲ್ಲಿ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ಟೆಸ್ಟ್ ವೇಳೇ ಭುಗಿಲೆದ್ದ ವಿವಾದದ ಕುರಿತು ಇಶಾಂತ್ ಶರ್ಮಾ ಮಾತನಾಡಿದರು.

ಹಿರಿಯ ವೇಗಿಯನ್ನು ಅವಮಾನಿಸಿದೆ ಎಂದು ಅನೇಕರು ಆರೋಪಿಸಿದರು. ಜಹೀರ್ ಖಾನ್ ನಿಜವಾಗಿಯೂ ತನಗೆ ಗುರುವಿನಂತಿದ್ದು, ಆತನನ್ನು ಎಂದಿಗೂ ನಿಂದಿಸುವುದಿಲ್ಲ ಎಂದು 34 ವರ್ಷದ ಇಶಾಂತ್ ಶರ್ಮಾ ಸ್ಪಷ್ಟಪಡಿಸಿದರು.
"ನಾನೇ ಅದನ್ನು ಹೇಳಿದ್ದೆ. ನಾನು ಯಾರಿಗೆ ಹೇಳಿದ್ದೇನೆ ಎಂಬುದು ಇಂದಿಗೂ ಜನರಿಗೆ ಅರ್ಥವಾಗುತ್ತಿಲ್ಲ. ಕ್ಯಾಚ್ ಬಿಟ್ಟ ಯಾರನ್ನೂ ನಾನು ನಿಂದಿಸಿರಲಿಲ್ಲ. ಜಹೀರ್ ಖಾನ್‌ಗೆ ಹೇಗೆ ನಿಂದಿಸಲು ಸಾಧ್ಯ?, ಅವರು ಅಕ್ಷರಶಃ ನನಗೆ ಗುರುಗಳಿದ್ದಂತೆ. ಈ ರೀತಿ ಹೇಳಲು ನಾನು ಎಂದಿಗೂ ಯೋಚಿಸುವುದಿಲ್ಲ," ಎಂದು ಇಶಾಂತ್ ಶರ್ಮಾ ಬಹಿರಂಗಪಡಿಸಿದರು.
ಕಿವೀಸ್‌ನ ಬ್ರೆಂಡನ್ ಮೆಕ್ಕಲಮ್ ಹೆಚ್ಚಿನ ರನ್ ಗಳಿಸುತ್ತಿದ್ದರಿಂದ ಆ ಕ್ಷಣದಲ್ಲಿ ತುಂಬಾ ಹತಾಶನಾಗಿದ್ದೆ. ಮೆಕ್ಕಲಮ್ ಎರಡನೇ ಇನ್ನಿಂಗ್ಸ್‌ನಲ್ಲಿ 302 ರನ್ ಗಳಿಸಿದ ಹೊರತಾಗಿಯೂ ಹೆಚ್ಚಿನ ಸ್ಕೋರಿಂಗ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
"ಬ್ರೆಂಡನ್ ಮೆಕ್ಕಲಮ್ ಅಧಿಕ ರನ್ ಗಳಿಸಿದ್ದರಿಂದ ಅದು ಕೇವಲ ಹತಾಶೆಯಾಗಿತ್ತು. ನಾವು ಕೇವಲ ಮೂವರು ವೇಗದ ಬೌಲರ್‌ಗಳಿದ್ದೆವು. ನಾನು, ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ. ಪ್ರತಿ ನಾಲ್ಕು ಓವರ್‌ಗಳ ನಂತರ, ನಾವು ಮತ್ತೆ ಬೌಲ್ ಮಾಡಬೇಕಾಗಿತ್ತು. ಅಲ್ಲಿನ ವಿಕೆಟ್ ತುಂಬಾ ಸಮತಟ್ಟಾಗಿತ್ತು. ನಾನು ನನ್ನ ಮೇಲಿನ ಹತಾಶೆಯನ್ನು ಹೊರ ಹಾಕುತ್ತಿದ್ದೆ," ಎಂದು ಇಶಾಂತ್ ಶರ್ಮಾ ಸ್ಪಷ್ಟಪಡಿಸಿದರು.