
ಬಾರ್ಡರ್ ಗವಾಸ್ಕರ್ ಟ್ರೋಫಿಯ ಆರಂಭದಿಂದಲೂ ಪಿಚ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದೆ. ಅದರಲ್ಲೂ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ವಿಶ್ಲೇಷಕರಿಂದ ಟೀಕೆ ಬಂದ ಬಳಿಕ ಐಸಿಸಿ ಕೂಡ ಪಿಚ್ ಬಗ್ಗೆ ತನ್ನ ತೀರ್ಮಾನ ತೆಗೆದುಕೊಂಡಿದೆ. ಇಂದೋರ್ ಟೆಸ್ಟ್‌ನ ಪಿಚ್ ಕಳಪೆ ಎಂದು ಐಸಿಸಿ ಗುರುತಿಸಿದ್ದು ಮೂರು ಡಿಮೆರಿಟ್ ಅಂಕಗಳನ್ನು ಕೂಡ ನೀಡಿದೆ.
ಈ ಬಳಿಕ ಇದೀಗ ಮಧ್ಯ ಪ್ರದೇಶ ಕ್ರಿಕೆಟ್ ಅಸೊಸಿಯೇಶನ್ ಇಂದೋರ್ ಪಿಚ್ ವಿಚಾರವಾಗಿ ಬಂದಿರುವ ಟೀಕೆಗಳಿಗೆ ಬಿಸಿಸಿಐ ಹಾಗೂ ಭಾರತ ತಂಡದ ಮ್ಯಾನೇಜ್‌ಮೆಂಟ್‌ನತ್ತಲೇ ಬೊಟ್ಟು ಮಾಡಿದೆ. ಇಂದೋರ್ ಪಿಚ್‌ನ ತಯಾರಿಯಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದಿದೆ ಎಂಪಿಸಿಎ.
ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿತು. ಏಳು ಸೆಶನ್‌ಗಳಲ್ಲಿ ಮುಗಿದ ಪಂದ್ಯದಲ್ಲಿ 31 ವಿಕೆಟ್‌ಗಳು ಉರುಳಿದ್ದು ಇದರಲ್ಲಿ 26 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದ್ದವು. ಕಳೆದ ಆರು ವರ್ಷಗಳಲ್ಲಿ ಇದು ಭಾರತದಲ್ಲಿ ಆಸ್ಟ್ರೇಲಿಯಾ ಸಾಧಿಸಿ ಕೇವಲ 2ನೇ ಟೆಸ್ಟ್ ಗೆಲುವು ಇದಾಗಿದೆ. ಈ ಎರಡು ಗೆಲುವುಗಳು ಕೂಡ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿಯೇ ಬಂದಿದೆ.
ಈ ಪಂದ್ಯದ ಬಳಿಕ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ "ಈ ಪಿಚ್ ಬಹಳ ಒಣಗಿದ್ದು ಬ್ಯಾಟ್ ಹಾಗೂ ಬಾಲ್ ಮಧ್ಯೆ ಸಮತೋಲನ ಉಂಟು ಮಾಡಿಲ್ಲ. ಆರಂಭದಿಂದಲೂ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಿದೆ" ಎಂದಿದ್ದು. ರೆಫ್ರಿ ನೀಡಿರುವ ವರದಿಯಂತೆ ಐಸಿಸಿ ಇಂದೋರ್ ಪಿಚ್ ಕಳಪೆ ಎಂದು ತೀರ್ಪು ನೀಡಿದ್ದು ಮೂರು ಡಿಮೆರಿಟ್ ಅಂಕಗಳನ್ನು ನೀಡಿದೆ. ಈ ಬಗ್ಗೆ ಎಂಪಿಸಿಎ ಅಧ್ಯಕ್ಷ ಅಭಿಲಾಷ್ ಖಂಡೇಕರ್ ಪ್ರತಿಕ್ರಿಯಿಸಿದ್ದು ಐಸಿಸಿಯ ಈ ತೀರ್ಪಿಗೆ ನಾವು ಜವಾಬ್ಧಾರಿ ಅಲ್ಲ ಎಂದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಖಂಡೇಕರ್ ಬಿಸಿಸಿಐ ಕಳುಹಿಸಿದ ಇಬ್ಬರು ಕ್ಯುರೇಟರ್‌ಗಳು ಒಂದು ವಾರಕ್ಕೂ ಹೆಚ್ಚು ಕಾಲ ಇದ್ದು ಬಿಸಿಸಿಐ ಹಾಗೂ ಭಾರತದ ಮ್ಯಾನೇಜ್‌ಮೆಂಟ್ ನೀಡಿರುವ ಸೂಚನೆಯಂತೆಯೇ ಸಿದ್ಧಪಡಿಸಿದೆ ಎಂದಿದ್ದಾರೆ.
"ಬಿಸಿಸಿಐ ಕಳುಹಿಸಿದ ಇಬ್ಬರು ಕ್ಯುರೇಟರ್‌ಗಳು ಪಂದ್ಯದ ಆರಂಭಕ್ಕೂ 8-10 ದಿನಗಳಿಗೆ ಮುನ್ನ ಆಗಮಿಸಿದ್ದರು. ಅವರ ಣ್ಗಾವಲಿನಲ್ಲಿಯೇ ಪಿಚ್ ಸಿದ್ಧಪಡಿಸಲಾಗಿದೆ. ಪಿಚ್ ಸಿದ್ಧಪಡಿಸುವುದರಲ್ಲಿ ಎಂಪಿಸಿಎ ಯ ಯಾವುದೇ ಪಾತ್ರವಿಲ್ಲ" ಎಂದಿದ್ದಾರೆ. ಮುಂದುವರಿದು ಅವರು, "ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಿಚ್‌ಗಳನ್ನು ತಯಾರಿಸುವಾಗ ಇತರ ಯಾವುದೇ ರಾಜ್ಯಗಳ ಕ್ರಿಕೆಟ್ ಮಂಡಳಿಗಳಂತೆಯೇ ಪಿಚ್ ತಯಾರಿಕೆಯಲ್ಲಿ ಎಂಪಿಸಿಎ ಭಾಗಿಯಾಗಿಲ್ಲ. ಬಿಸಿಸಿಐ ಅಧಿಕಾರಿಗಳೇ ಬಂದಿದ್ದರು, ಅವರಿಗೆ ಬಿಸಿಸಿಐ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ದೇಶನಗಳನ್ನು ನೀಡುತ್ತಿತ್ತು" ಎಂದಿದ್ದಾರೆ ಎಂಪಿಸಿಎ ಅಧ್ಯಕ್ಷ ಅಭಿಲಾಷ್ ಖಂಡೇಕರ್.
ಆದರೆ ಮೂರು ದಿನಗಳಿಗೆ ಪಂದ್ಯ ಮುಕ್ತಾಯವಾದ ವಿಚಾರವಾಗಿ ಎದ್ದಿರುವ ಟೀಕೆಗೆ ಎಂಪಿಸಿಎ ಅಧ್ಯಕ್ಷ ಅಭಿಲಾಶ್ ಖಂಡೇಕರ್ ಬೇಸರ ವ್ಯಕ್ತಪಡಿಸಿದ್ದಾರೆ. "ಮೂರು ದಿನಗಳಲ್ಲಿ ಪಂದ್ಯ ಮುಕ್ತಾಯವಾಗಿರುವುದು ಕಳವಳಕಾರಿ ಎಂದರೆ, ನಾಗ್ಪುರ ಹಾಗೂ ದೆಹಲಿಲ್ಲಿಯೂ ಅದೇ ರೀತಿ ಆಗಿತ್ತು. ಅಲ್ಲೂ ಕೂಡ ಪಿಚ್ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆದರೆ ಪಂದ್ಯ ಮುಕ್ತಾಯದ ಬಳಿಕ ಎರಡು ತಂಡಗಳ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು" ಎಂದಿದ್ದಾರೆ ಖಂಡೇಕರ್.