ತವರಿನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಗೆಲುವಿನತ್ತ ದಾಪುಗಾಲು ಇಟ್ಟಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮಹಿಳಾ ತಂಡ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಬಿಗಿ ಹಿಡಿತ ಸಾಧಿಸಿದೆ. ಶುಕ್ರವಾರ ಎರಡನೇ ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ 6 ವಿಕೆಟ್‌ಗೆ 186 ರನ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 478 ರನ್‌ಗಳ ಮುನ್ನಡೆ ಸಾಧಿಸಿದೆ.

ಭಾರತದ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಕರ್ ಕ್ರೀಸ್‌ನಲ್ಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ 44 ರನ್, ಪೂಜಾ ವಸ್ತ್ರಾಕರ್ 17 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ 428 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವನ್ನು 136 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 292 ರನ್ ಗಳ ಮುನ್ನಡೆ ಸಾಧಿಸಿದೆ. ಆದರೆ, ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಇಂಗ್ಲೆಂಡ್‌ಗೆ ಫಾಲೋ-ಆನ್ ನೀಡಲಿಲ್ಲ. ಬದಲಿಗೆ ಟೀಮ್ ಇಂಡಿಯಾ ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಎರಡನೇ ದಿನದಾಟವನ್ನು 7 ವಿಕೆಟ್‌ಗೆ 410 ರನ್ ಗಳಿಂದ ಮುಂದುವರಿಸಿದ ಟೀಮ್ ಇಂಡಿಯಾ ಅಂತಿಮವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 428 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ 67 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 136 ರನ್‌ಗಳಿಗೆ ಕುಸಿಯಿತು. ನ್ಯಾಟ್ ಸೀವರ್ ಬ್ರಂಟ್ ಇಂಗ್ಲೆಂಡ್ ಪರ ಗರಿಷ್ಠ 59 ರನ್ ಗಳಿಸಿದರು. ಇವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ದೀಪ್ತಿ ಶರ್ಮಾ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಇವರು 7 ರನ್ ನೀಡಿ 5 ವಿಕೆಟ್ ಪಡೆದರು. ಸ್ನೇಹ ರಾಣಾ 2 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ 61 ರನ್‌ಗಳ ಜೊತೆಯಾಟ ನೀಡಿದರು. ಶೆಫಾಲಿ ವರ್ಮಾ 33, ಸ್ಮೃತಿ ಮಂಧಾನ 26 ರನ್‌ಗಳ ಕಾಣಿಕೆ ನೀಡಿದರು. ಯಾಸ್ತಿಕಾ ಭಾಟಿಯಾ 9, ಜೆಮಿಮಾ ರಾಡ್ರಿಗಸ್ 27 ರನ್ ಗಳಿಸಿ ಔಟಾದರು. ದೀಪ್ತಿ ಶರ್ಮಾ 20 ರನ್ ಗಳಿಸಿದರು.