ಭಾರತ ಹಾಗೂ ಆಸ್ಟ್ರೇಲಿಯಾ ನಡುವನ ಮೂರನೇ ಏಕದಿನ ಪಂದ್ಯದ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಟೀಮ್ ಇಂಡಿಯಾ ಸತತ ಮೂರನೇ ಏಕದಿನ ಪಂದ್ಯದಲ್ಲೂ ಟಾಸ್ ಸೋತು ನಿರಾಸೆ ಅನುಭವಿಸಿದೆ. ಇನ್ನು ಟೀಮ್ ಇಂಡಿಯಾ ಅಂತಿಮ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಎರಡು ಬದಲಾವಣೆಗಳನ್ನು ಮಾಡಿಕೊಂಡು ಅಂಗಳಕ್ಕೆ ಇಳಿದಿದೆ. ಈ ವೇಳೆ ಪರ್ತ್‌ನಲ್ಲಿ ಪದಾರ್ಪಣೆ ಮಾಡಿದ್ದ ನಿತೀಶ್ ಕುಮಾರ್ ರೆಡ್ಡಿ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಭಾರತ ಆಡುವ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕೆ ಇಳಿದಿದೆ. ಭರವಸೆಯ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ರಿಸ್ಟ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರಿಗೆ ಅವಕಾಶ ನೀಡಲಾಗಿದೆ. ಇನ್ನು ಅರ್ಷದೀಪ್ ಸಿಂಗ್ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ಮೂರನೇ ಪಂದ್ಯದಿಂದ ಹೊರಗಿದ್ದಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಇದಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

ಸಿಡ್ನಿಯಲ್ಲಿ ಟಾಸ್ ಆದ ಬಳಿಕ ಬಿಸಿಸಿಐ ಮಹತ್ವದ ಹೇಳಿಕೆ ನೀಡಿದೆ. ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಡುವ ತಂಡದಲ್ಲಿ ವಿಫಲರಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಇವರು ಗಾಯಕ್ಕೆ ತುತ್ತಾಗಿದ್ದು ತಂಡಕ್ಕೆ ಪೆಟ್ಟು ಬಿದ್ದಂತೆ ಆಗಿದೆ. ಏಕದಿನ ಸರಣಿಯ ಬಳಿಕ ಭಾರತ ಆಸೀಸ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಈ ವೇಳೆ ಇವರು ಸಹ ತಂಡದಲ್ಲಿ ಸ್ಥಾನ ಪಡೆದಿದ್ದರಿಂದ ತಂಡಕ್ಕೆ ಪೆಟ್ಟು ಬಿದ್ದಿದೆ. ಅಕ್ಟೋಬರ್ 29 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದೆ.
ಟೀಮ್ ಇಂಡಿಯಾದ ಪರ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣಾ, ಏಕದಿನ ಪಂದ್ಯಕ್ಕೆ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ. ಇದೇ ಆಸ್ಟ್ರೇಲಿಯಾ ವಿರುದ್ಧ ಸೆ.27, 2023ರಂದು ರಾಜಕೋಟ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯವನ್ನು ಆಡಿದ್ದ ಪ್ರಸಿದ್ಧ್ , 744 ದಿನಗಳ ಬಳಿಕ ಮತ್ತೆ ಬ್ಲ್ಯೂ ಜೆರ್ಸಿ ತೊಟ್ಟಿದ್ದಾರೆ. ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪರ ಅಮೋಘ ಬೌಲಿಂಗ್ ದಾಳಿ ನಡೆಸಿ ಅಬ್ಬರಿಸಿದ್ದರು. ಅಲ್ಲದೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು. ಈ ಅವಕಾಶವನ್ನು ಬಳಿಸಿಕೊಂಡು ಪ್ರಸಿದ್ಧ್ ಮುಂಬರುವ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದಾರೆ. ಈ ಅವಕಾಶವನ್ನು ಪ್ರಸಿದ್ಧ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.