ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19ರಿಂದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅನುಭವಿ ಹಾಗೂ ಯುವಕರಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. ಆದರೆ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೂ, ಆಯ್ಕೆ ದಾರರು, ಯುವ ಆಟಗಾರರನ್ನು ಕಡೆಗಣನೆ ಮಾಡಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಭಾನುವಾರ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ರೋಹಿತ್ ಶರ್ಮಾ ಮುಂದಾಳತ್ವದ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಧ್ರುವ್ ಜುರೇಲ್, ಸರ್ಫರಾಜ್ ಖಾನ್‌ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ವಿಕೆಟ್ ಕೀಪರ್ ರೂಪದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಮೂವರು ಆಟಗಾರರನ್ನು ಆಯ್ಕೆ ಸಮಿತಿ ಕಡೆಗಣನೆ ಮಾಡಿದೆ.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಯುವ ಆಟಗಾರ ಮುಶೀರ್ ಖಾನ್. ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಸದ್ದು ಮಾಡಿದ್ದರು. ಅಲ್ಲದೆ ರಣಜಿ ಟೂರ್ನಿಯಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ಇವರಿಗೆ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಪರ ಆಡುವ ಅವಕಾಶ ಲಭಿಸಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮುಶೀರ್ ಅಬ್ಬರಿಸಿದ್ದರು.
ಮುಶೀರ್ ಮೊದಲ ಇನಿಂಗ್ಸ್‌ನಲ್ಲಿ 373 ಎಸೆತಗಳಲ್ಲಿ 181 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಇವರ ಆಟವನ್ನು ಕಂಡು ಇವರಿಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗುತ್ತದೆ ಎಂದೇ ಪರಿಗಣಿಸಲಾಗಿತ್ತು. ಆದರೆ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ.

ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತದ ಗೆಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ವೇಗಿ ಅರ್ಶ್‌ದೀಪ್ ಸಿಂಗ್, ಇವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಆಸೆ ಕೈ ಗೂಡಲಿಲ್ಲ. ಇವರ ಬದಲಿಗೆ ಯಶ್ ದಯಾಳ್ ಅವರಿಗೆ ಅವಕಾಶ ನೀಡಲಾಗಿದೆ. ದುಲೀಪ್ ಟ್ರೋಫಿಯಲ್ಲಿ ದಯಾಳ್ ಪ್ರಭಾವ ಬೀರಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡಲಾಯಿತು.
ತಮ್ಮ ಬಿಗುವಿನ ದಾಳಿ ಹಾಗೂ ಸ್ವಿಂಗ್‌ನಿಂದಲೇ ಹೆಸರುವಾಸಿಯಾದ ಬೌಲರ್ ನವದೀಪ್ ಸೈನಿ. ದುಲೀಪ್ ಟ್ರೋಫಿಯಲ್ಲಿ ಸೈನಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದ ಆಟಗಾರ. ಇವರು ಬೌಲಿಂಗ್‌ನಲ್ಲಿ ಎರಡೂ ಇನಿಂಗ್ಸ್ ಸೇರಿದಂತೆ ಒಟ್ಟು 5 ವಿಕೆಟ್ ಪಡೆದರೆ, ಬ್ಯಾಟಿಂಗ್‌ನಲ್ಲೂ ಅರ್ಧಶತಕ ಬಾರಿಸಿ ಮಿಂಚಿದ್ದರು. ಇವರು ಟೆಸ್ಟ್ ತಂಡ ಸೇರುವ ಕನಸು ಕಂಡಿದ್ದರು. ಆದರೆ ಈ ಆಸೆ ಸಹ ಕಮರಿದೆ.
ಈಗ ಭಾರತ ತಂಡವನ್ನು ಮೊದಲ ಟೆಸ್ಟ್‌ಗೆ ಆಯ್ಕೆ ಮಾಡಲಾಗಿದ್ದು, ಎರಡನೇ ಟೆಸ್ಟ್ ಪಂದ್ಯಕ್ಕೆ ಈ ಯುವ ಆಟಗಾರರಿಗೆ ಅವಕಾಶ ನೀಡುತ್ತಾರಾ ಕಾದು ನೋಡಬೇಕಿದೆ.