ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ (ಐಸಿಸಿ) ಭಾರಿ ಗದ್ದಲ ನಡೆದಿದೆ. ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೆಫ್ ಅಲ್ಲಾರ್ಡೈಸ್ ಅವರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಚಾಂಪಿಯನ್ಸ್ ಟ್ರೋಫಿಗೆ ಕೆಲವೇ ವಾರಗಳಿರುವಾಗ ಅವರು ಐಸಿಸಿ ಸಿಇಒ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಆತಿಥೇಯ ಪಾಕಿಸ್ತಾನದ ಸನ್ನದ್ಧತೆಯ ಸ್ಪಷ್ಟ ಚಿತ್ರಣವನ್ನು ನೀಡುವಲ್ಲಿ ವಿಫಲವಾಗಿದೆ.
57 ವರ್ಷದ ಅಲಾರ್ಡೈಸ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಪರೇಷನ್ಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ 2012 ರಲ್ಲಿ ಕ್ರಿಕೆಟ್ ಜನರಲ್ ಮ್ಯಾನೇಜರ್ ಆಗಿ ಐಸಿಸಿಗೆ ಸೇರಿದ್ದರು. ಎಂಟು ತಿಂಗಳ ಕಾಲ ಹಂಗಾಮಿ ಸಿಇಒ ಆಗಿ ಸೇವೆ ಸಲ್ಲಿಸಿದ ಬಳಿಕ ಅವರನ್ನು ನವೆಂಬರ್ 2021 ರಲ್ಲಿ ಐಸಿಸಿ ಸಿಇಒ ಆಗಿ ನೇಮಿಸಲಾಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಇದು ಒಂದು ಸುಯೋಗವಾಗಿದೆ. ನಾವು ಸಾಧಿಸಿದ ಫಲಿತಾಂಶಗಳ ಬಗ್ಗೆ ನನಗೆ ಹೆಮ್ಮೆ ಇದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ನ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಐಸಿಸಿ ಸದಸ್ಯರಿಗಾಗಿ ಸ್ಥಾಪಿಸಲಾದ ವಾಣಿಜ್ಯ ಅಡಿಪಾಯದವರೆಗೆ. ನಾನು ಕೆಳಗಿಳಿಯಲು ಮತ್ತು ಹೊಸ ಸವಾಲುಗಳನ್ನು ಅನುಸರಿಸಲು ಇದು ಸರಿಯಾದ ಸಮಯ ಅಂದುಕೊಳ್ಳುತ್ತೇನೆ ಎಂದು ಅಲ್ಲಾರ್ಡೈಸ್ ಹೇಳಿದ್ದಾರೆ.
ಐಸಿಸಿ ಅಧಿಕೃತ ಹೇಳಿಕೆಯಲ್ಲಿ ಜೆಫ್ ಅಲ್ಲಾರ್ಡೈಸ್ ರಾಜೀನಾಮೆ ನೀಡಿರುವುದಕ್ಕೆ ನಿಖರವಾದ ಕಾರಣಗಳನ್ನು ಉಲ್ಲೇಖಿಸಿಲ್ಲ. ಆದರೆ, ವರದಿಗಳ ಪ್ರಕಾರ ಈ ಬೆಳವಣಿಗೆಯು ಕೆಲವು ಸಮಯದಿಂದ ನಡೆಯುತ್ತಿದ್ದು, ಅಮೆರಿಕಾದಲ್ಲಿ ನಡೆದ ನಡೆದ ಐಸಿಸಿ ಟಿ20 ವಿಶ್ವಕಪ್ ಪರಿಸ್ಥಿತಿಗಳು ಮತ್ತು ಬಜೆಟ್ ಮಿತಿಮೀರಿದ ವಿಷಯದಲ್ಲಿ ಭಾರಿ ಆಕ್ರಮ ನಡೆದಿತ್ತು. ಈ ಬಗ್ಗೆ ಆಡಿಟಿಂಗ್ ಇನ್ನೂ ನಡೆಯುತ್ತಿದೆ. ಸಿಇಒ ಆಗಿರುವ ಅವರು, ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನದ ಸಿದ್ಧತೆಯ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡಬೇಕಾಗಿತ್ತು. ಆದರೆ ಇದನ್ನು ನೀಡುವಲ್ಲಿ ಅಲ್ಲಾರ್ಡೈಸ್ ವಿಫಲವಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಭದ್ರತಾ ಕಾರಣಗಳಿಂದಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿಲ್ಲ. ಹೀಗಾಗಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಕರಾಚಿ ಮತ್ತು ರಾವಲ್ಪಿಂಡಿಯಲ್ಲಿನ ಕ್ರೀಡಾಂಗಣದ ಕಾಮಗಾರಿಗಳು ಇನ್ನೂ ಭಾಗಶಃ ನಿರ್ಮಾಣ ಹಂತದಲ್ಲಿವೆ ಅಥವಾ ನವೀಕರಣ ಹಂತದಲ್ಲಿವೆ ಎಂದು ಐಸಿಸಿ ಭಾವಿಸಿತ್ತು. ಆದರೆ ಪಾಕಿಸ್ತಾನದಿಂದ ಬಂದ ಫೋಟೋಗಳು ಹೆಚ್ಚು ಸಕಾರಾತ್ಮಕವಾಗಿಲ್ಲ.
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಅಲ್ಲಾರ್ಡೈಸ್ ಅವರ ಕೊಡುಗೆಯನ್ನು ಶ್ಲಾಘಿಸಿದರು. ಐಸಿಸಿ ಮಂಡಳಿಯ ಪರವಾಗಿ, ಜೆಫ್ ಅವರ ಅಧಿಕಾರಾವಧಿಯಲ್ಲಿ ನಾಯಕತ್ವ ಮತ್ತು ಬದ್ಧತೆಗಾಗಿ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಅವರ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವರ ಸೇವೆಗೆ ನಾವು ನಿಜವಾಗಿಯೂ ಕೃತಜ್ಞರಾಗಿರುತ್ತೇವೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇವೆ ಎಂದು ಜಯ್ ಶಾ ತಿಳಿಸಿದ್ದಾರೆ.