ಕಲೆ ಎಂದ್ರೆನೇ ಹಾಗೆ ಅದು ಯಾರ ಸ್ವತ್ತು ಅಲ್ಲ. ಅದನ್ನು ಆರಾಧಿಸಿದವರನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಅದನ್ನು ಪ್ರೀತಿಸಿದವರನ್ನ ಸಾಧಕರನ್ನಾಗಿ ಮಾಡುತ್ತದೆ. ಕಲೆಗೆ ಶರಣಾದರೆ ಎಲ್ಲವೂ ಸಾಧಕನ ಹಿಂದೆ ಸಲೀಸಾಗಿ ಬರುತ್ತದೆ. ಅದಕ್ಕೆ ಯಾವ ಹಂಗೂ ಇಲ್ಲ. ಇತಿಹಾಸದ ಪುಟಗಳನ್ನು ತಿರುವಿದಾಗ ಕಲೆಯಿಂದ ಖ್ಯಾತಿ ಪಡೆದ ಸಾಧಕರನ್ನು ನಾವು ಕಾಣಬಹುದು. ಈಗಲ ಈ ಕಲೆಯನ್ನೇ ನಂಬಿಕೊಂಡು ಬೆಳೆದವರು ಅದೆಷ್ಟೋ ಜನರಿದ್ದಾರೆ. ಇದೇ ಸಾಲಿಗೆ ಸೇರುವ ಅಪ್ಪಟ ದೇಸಿ ಪ್ರತಿಭೆ ಈ ಮೈಸೂರಿನ ಸಾಧಕ.
ಇವರ ಕೈಗೆ ಒಂದು ಪೇಪರ್, ಪೆನ್ನು ನೀಡಿದರೆ ಕ್ಷಣಾರ್ಧದಲ್ಲಿ ತಮ್ಮ ತಲೆಯಲ್ಲಿ ಮೂಡಿದ ಚಿತ್ರಕ್ಕೆ ಗೆರೆಗಳ ಮೂಲಕ ಜೀವ ತುಂಬುವ ಕಲಾವಿದ. ಕೈ ನಡುಗುತ್ತಾ ಇದ್ದರೂ ಸಹ ಕಲೆಯ ಮೇಲಿನ ಪ್ರೀತಿ ಇನ್ನು ಕಡಿಮೆ ಆಗಿಲ್ಲ. ಇವರ ಪೆನ್ನಿನ ಅಂಚಿನಲ್ಲಿ ಅದೆಷ್ಟೋ ಕ್ರಿಕೆಟ್ ಆಟಗಾರರು ಸೆಲಿಬ್ರಿಟಿಗಳು ಕುಣಿದಾಡಿದ್ದಾರೆ. ಇವರ ಪೆನ್ನು ಸಹ ಇವರ ಕೈ ನೀಡುವ ಸನ್ನೇಯನ್ನೇ ಹಿಂಬಾಲಿಸಿ ಕಲ್ಪನಾ ಪರದೆಯಲ್ಲಿ ಮೂಡಿದ್ದ ಚಿತ್ರಕ್ಕೆ ಬಿಳಿ ಹಾಳೆಯಲ್ಲಿ ಜೀವ ತುಂಬುತ್ತದೆ. ಬಿಳಿಯ ಹಾಳೆಯ ಮೇಲೆ ಇವರು ಎರಡು ಲೈನ್ ಗೀಚಿದ್ರೂ ಸಹ ಅದಕ್ಕೆ ಜೀವ ಬಂದು ಬಿಡುತ್ತದೆ. ಅದೆಷ್ಟೋ ಖ್ಯಾತನಾಮರನ್ನು ತಮ್ಮ ಕಲೆಯ ಮೂಲಕ ತಮ್ಮ ಮನೆ ತುಂಬಿಸಿಕೊಂಡಿರುವ ಕಲಾವಿದ ಪಾಡುರಂಗರಾವ್. ಮೈಖೇಲ್ ಕನ್ನಡ ಇವರೊಂದಿಗೆ ವಿಶೇಷ ಸಂದರ್ಶನವನ್ನು ನಡೆಸಿದೆ.

81 ವರ್ಷದ ಪಾಂಡುರಂಗರಾವ್, ಮೂಲತಃ ಶಿಡ್ಲಘಟ್ಟದವರಾದ ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ಅಲ್ಲಿಯೇ ತಮ್ಮ ಶಾಲಾ ವಿದ್ಯಾಭ್ಯಾಸ ಮುಗಿಸಿದ ಅವರು ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟಕ್ಕೆ ಬಂದು ತಮ್ಮ ಉನ್ನತ ಶಿಕ್ಷಣ ಪೂರ್ಣಗೊಳಿಸಿದರು. ಡಿಪ್ಲೋಮಾ ಪದವಿ ಪಡೆದ ಅವರು ಬಿಲೈ ಸ್ಟೀಲ್ ಕಾರ್ಖಾನೆಯಲ್ಲಿ ಕೆಲಸ ಶುರು ಮಾಡಿದರು. ಕೆಲಸದ ಜೊತೆಗೆ ಆರಂಭದಿಂದಲೂ ಇದ್ದ ವ್ಯಂಗ್ಯಚಿತ್ರ ಬರೆಯುವ ಹವ್ಯಾಸ ಬಿಡಲಿಲ್ಲ. ಇವರ ವ್ಯಂಗ್ಯಚಿತ್ರಗಳು ಹಲವು ಮ್ಯಾಗಜಿನ್ ಪತ್ರಿಕೆಗಳಲ್ಲಿ ಸ್ಥಾನ ಪಡೆದಿವೆ.
ಬಾಲ್ಯದಿಂದಲ್ಲೇ ಕ್ರೀಡೆ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಪಾಂಡುರಂಗರಾವ್ ಕ್ರಿಕೆಟ್ ಆಟದಲ್ಲಿ ಮುಂದಿದ್ದರು. ಹೀಗಾಗಿ ಕ್ರಿಕೆಟ್ ಆಟಗಾರರ ವ್ಯಂಗ್ಯಚಿತ್ರಗಳನ್ನು ಬರೆಯಲು ಅವರಿಗೆ ಸಮಯ ಬೇಕಿರಲಿಲ್ಲ. ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಹಾಳೆ ಮೇಲೆ ಬಿಡಿಸುವ ತಾಕತ್ತನ್ನು ಪಾಂಡುರಂಗರಾವ್ ಹೊಂದಿದ್ದರು. ಆರಂಭದಲ್ಲಿ ಅವರ ವ್ಯಂಗ್ಯಚಿತ್ರಗಳು ಮ್ಯಾಗಜಿನ್‌ನಲ್ಲಿ ಬಂದರೆ ಒಂದಕ್ಕೆ 5 ರೂ. ಅಂತೆ ಸಿಗುತ್ತಿತ್ತು. ಒಂದು ದಿನ ಐದು ವ್ಯಂಗ್ಯಚಿತ್ರಗಳಿಗೆ 25 ರೂ. ಪೋಸ್ಟ್‌ನಲ್ಲಿ ಬಂದಾಗ ನನಗೆ ಅತ್ಯಂತ ಸಂತಸವಾಯಿತು ಎಂದು ಅಂದಿನ ದಿನಗಳನ್ನು ಪಾಂಡುರಂಗರಾವ್ ಮೆಲುಕು ಹಾಕಿದ್ದಾರೆ.

ಸಾಮಾನ್ಯ ರೂಪದಲ್ಲಿ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದ ಪಾಂಡುರಂಗರಾವ್ ಅವರಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಆರ್ ಕೆ ಲಕ್ಷ್ಮಣ್ ಅವರನ್ನು ನೋಡಿದ ನಂತರ ಇನ್ನೂ ಉತ್ತಮ ವ್ಯಂಗ್ಯಚಿತ್ರಗಳನ್ನು ಬರೆಯಬೇಕೆಂದು ಅನಿಸಿತು. ಇದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಅವರು ವ್ಯಂಗ್ಯಚಿತ್ರ ಲೋಕದಲ್ಲಿ ತಮ್ಮ ಛಾಪು ಮೂಡಿಸಿದರು. ಕ್ರಿಕೆಟ್ ಆಟಕ್ಕೂ ವ್ಯಂಗ್ಯಚಿತ್ರಗಳನ್ನು ಪರಿಚಯಿಸಿದ ಅವರು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು. ಟೀಮ್ ಇಂಡಿಯಾ ಸೇರಿದಂತೆ ಉಳಿದ ದೇಶಗಳ ಕ್ರಿಕೆಟಿಗರ ವ್ಯಂಗ್ಯಚಿತ್ರವನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.
ಇತ್ತೀಚೆಗೆ ಮರದ ಚಮಚದಲ್ಲಿ 110 ಕ್ರಿಕೆಟಿಗರ ವ್ಯಂಗ್ಯಚಿತ್ರಗಳ್ನು ಬಿಡಿಸುವ ಮೂಲಕ ದಾಖಲೆ ಮಾಡಿದ್ದಾರೆ. ಹವ್ಯಾಸದಿಂದ ವ್ಯಂಗ್ಯಚಿತ್ರಕಾರರಾದ ಇವರು ಮಾಜಿ ಕ್ರಿಕೆಟ್ ಅಂಪೈರ್, ಕ್ರಿಕೆಟ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಇನ್ನೂ ಬ್ಯಾಡ್ಮಿಂಟನ್ ಆಡುತ್ತಿದ್ದು, ಯುವಜನತೆಗೆ ಮಾದರಿಯಾಗಿದ್ದಾರೆ. ಯುಎಸ್ಎನ ರೇ ಬರ್ನ್ಸ್ ಸ್ಕೂಲ್ ಆಫ್ ಕಾರ್ಟೂನಿಂಗ್ ಡಿಪ್ಲೊಮಾ ಪದವಿಯನ್ನೂ ಪಡೆದಿದ್ದಾರೆ. ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿವಿಧ ವಿಷಯಗಳ ಕುರಿತು ಪ್ರಕಟವಾದ ವ್ಯಂಗ್ಯಚಿತ್ರಗಳು ಎಲ್ಲರ ಮೆಚ್ಚುಗೆ ಪಡೆದಿವೆ.
ಸುಮಾರು 55 ಬಾರಿ ಪಾಂಡುರಂಗರಾವ್ ಅವರು ಏಕವ್ಯಕ್ತಿ ಕಾರ್ಟೂನ್ ಪ್ರದರ್ಶನಗಳನ್ನು ನಡೆಸಿರುವುದು ರಾಷ್ಟ್ರೀಯ ದಾಖಲೆ ಆಗಿದೆ. ಅವರು 1994 ರಿಂದ ಇಲ್ಲಿವರೆಗೆ 300 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ವಿಶ್ವದ ಸ್ಟಾರ್ ಕ್ರಿಕೆಟಿಗರ 209 ವ್ಯಂಗ್ಯಚಿತ್ರಗಳ ರಚನೆ, ಮರದ ಚಮಚಗಳ ಮೇಲೆ 110 ಕ್ರಿಕೆಟಿಗರ ಮುಖಗಳ ರಚನೆ, ಕ್ರಿಕೆಟ್ ಆಡುವ ಚಿಕ್ಕ ಮತ್ತು ದೊಡ್ಡ ಗಾತ್ರದ ಫ್ಲಿಪ್ ಬುಕ್ ಅನಿಮೇಷನ್ ರಚನೆ ಮಾಡಿರುವ ಅವರು ಲಿಮ್ಕಾ ಪುಸ್ತಕ, ಭಾರತ ಪುಸ್ತಕ ಮತ್ತು ವಿಶ್ವ ದಾಖಲೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಮರದ ಚಮಚದಲ್ಲಿ ಭಾರತೀಯ 110 ಕ್ರಿಕೆಟಿಗರ ಮುಖಗಳನ್ನು ಬಿಡಿಸುವ ಮೂಲಕ ಅವರು ಭಾರತ ಮತ್ತು ವಿಶ್ವ ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆದಿದ್ದಾರೆ.