ಪಂಜಾಬ್ ವಿರುದ್ಧ ಆರ್ ಸಿಬಿ ಸೋಲಿನ ಹಿಂದಿರುವ 5 ಕಾರಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಪಾಲಿಗೆ ಈ ಬಾರಿಯ ಐಪಿಎಲ್ ಉಳಿದಿರುವ ಇನ್ನೊಂದೇ ಪಂದ್ಯದ ವರದಿಗಾರಿಕೆಗೆ ಹೋಗುವ ಕ್ರೀಡಾ ಪತ್ರಕರ್ತರು 'ನಿರೀಕ್ಷೆಯಂತೆ ಆರ್ ಸಿಬಿ ತಂಡವು ಸೋಲು ಕಂಡಿದೆ' ಎಂಬ ವಾಕ್ಯವನ್ನು ತಮ್ಮ ಕಂಪ್ಯೂಟರ್ ನ ಯಾವುದೋ ಒಂದು ಕಡೆ ಸೇವ್ ಮಾಡಿಟ್ಟುಕೊಳ್ಳಬೇಕಾದ ಸಂದರ್ಭ ಬಂದೊಂದಗಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ ಅಥವಾ ನಮ್ಮ ಬೆಂಗಳೂರು ತಂಡದ ಬಗೆಗಿನ ಕೀಳರಿಮೆಯೂ ಅಲ್ಲ. ಅದು ವಾಸ್ತವ.
ಏಕೆಂದರೆ, ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ ಆಡಿರುವ 12 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದು, 9 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿರುವ ಆರ್ ಸಿಬಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ. ಇನ್ನು, ಕೆಲವರಂತೂ ವಿಜಯ್ ಮಲ್ಯ ಬೆಂಗ್ಳೂರಲ್ಲೇ ಇದ್ದಿದ್ರೆ ಹಿಂಗಾಗುತ್ತಿರಲಿಲ್ಲ ಅಂತ ಸೀರಿಯಸ್ಸಾಗೇ ಮಾಡಾಡಿಕೊಳ್ಳುತ್ತಿದ್ದಾರೆ!
ಘಟನಾನುಘಟಿ ಬ್ಯಾಟ್ಸ್ ಮನ್ ಗಳಿದ್ದರೂ ತನ್ನ ಸೋಲಿನ ಅಪಯಶಸ್ಸನ್ನು ಮುಂದುವರಿಸಿಕೊಂಡು ಹೋಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶನಿವಾರ (ಮಾ 5) ರಾತ್ರಿ , ತನ್ನ ತವರಿನ ಅಂಗಳದಲ್ಲೇ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.
ಎದುರಾಳಿ ತಂಡ ಪೇರಿಸಿದ್ದ ಕೇವಲ 138 ರನ್ (20 ಓವರ್ ಗಳಲ್ಲಿ, 7 ವಿಕೆಟ್ ನಷ್ಟಕ್ಕೆ) ಮೊತ್ತವನ್ನು ಹಿಂದಿಕ್ಕುವಲ್ಲಿ ಪರದಾಡಿತಲ್ಲದೆ, 19 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 119 ರನ್ ಮೊತ್ತ ಗಳಿಸಿ, 19 ರನ್ ಗಳ ಸೋಲು ಕಂಡಿತು.
ಈ ಸೋಲಿನ ವಿಶ್ಲೇಷಣೆ ಇಲ್ಲಿ ನಿಮಗಾಗಿ.

ಆದರೆ, ಬ್ಯಾಟಿಂಗ್ ಇರಲಿಲ್ಲ
ಟಾಸ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಉತ್ತಮ ನಿರ್ಧಾರವೇ ಆಗಿತ್ತು. ಆದರೆ, ಆ ನಿರ್ಧಾರಕ್ಕೆ ಗೆಲುವಿನ ಗೌರವ ಸಿಗಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದಿದ್ದ ಮಂದೀಪ್ ಸಿಂಗ್ ಗೆ ಬೆಂಬಲವಾಗಿ ಯಾರೂ ನಿಲ್ಲದಿದ್ದುದೇ ಒಂದು ಮಹಾ ದುರಂತ.

ಮಂದೀಪ್ ಗೆ ಬೆಂಬಲ ಸಿಗಲೇ ಇಲ್ಲ
ಈ ಬಾರಿಯ ಐಪಿಎಲ್ ನಲ್ಲಿ ಸತತವಾಗಿ ವೈಫಲ್ಯಕ್ಕೀಡಾಗಿರುವ ಕ್ರಿಸ್ ಗೇಲ್, ಈ ಪಂದ್ಯದಲ್ಲೂ ಸೊನ್ನೆ ಸುತ್ತಿದರು. ಭರ್ಜರಿ ಹೊಡೆತಗಳು ಬೇಡ, ಕನಿಷ್ಠ ಪಕ್ಷ ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಿ , ಉತ್ತಮವಾಗಿ ಆಡುತ್ತಿದ್ದ ಮಂದೀಪ್ ಗೆ ಅವರು ಕೊಂಚ ಬೆಂಬಲ ನೀಡಿದ್ದರೂ ಸಾಕಿತ್ತು. ಆರ್ ಸಿಬಿಗೆ ಅದು ವರದಾನವಾಗಿರುತ್ತಿತ್ತು.

ನಾಯಕನಿಂದ ನಿರೀಕ್ಷಿತ ಆಟ ಹೊರಹೊಮ್ಮಲಿಲ್ಲ
ಕೇವಲ 1 ರನ್ ಮೊತ್ತವಿದ್ದಾಗ ಕ್ರಿಸ್ ಗೇಲ್ ವಿಕೆಟ್ ಉರುಳಿದರೂ, ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಗಟ್ಟಿಯಾಗಿ ನಿಲ್ಲದೇ ಇದ್ದಿದ್ದು ತಂಡದ ಮತ್ತೊಂದು ವೈಫಲ್ಯಕ್ಕೆ ಕಾರಣ. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ, ಕೊಹ್ಲಿ ಸಾಧನೆ ಈ ಬಾರಿ ಉತ್ತಮವಾಗಿಲ್ಲ.

ಬೇಗನೇ ಔಟಾದರೂ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್
ಆರ್ ಸಿಬಿ ಪಾಲಿಗೆ ಆಗಾಗ ಆಪದ್ಭಾಂಧವ ಎನಿಸಿರುವ ಎಬಿ ಡಿವಿಲಿಯರ್ಸ್ ಕೊಂಚ ಅಬ್ಬರಿಸಿದರೂ ಅವರೂ ವೈಯಕ್ತಿಕವಾಗಿ ಕೇವಲ 10 ರನ್ ಗಳಿಸಿ ಔಟಾಗಿದ್ದು ತಂಡದ ಹಿನ್ನೆಡೆಗೆ ಮತ್ತೊಂದು ಬಲವಾದ ಕಾರಣ.

ಮಿಕ್ಕವರಿಗೆ ಏನಾಗಿತ್ತು?
ಗೇಲ್, ಕೊಹ್ಲಿ, ಎಬಿಡಿ - ಈ ಮೂವರ ಕಡೆಗೆ ಮಾತ್ರ ಬೆರಳು ತೋರಿಸಿದರೇನು ಪ್ರಯೋಜನ? ತಂಡದ ಯಾವುದೇ ಬ್ಯಾಟ್ಸ್ ಮನ್ (ಮಂದೀಪ್ ಹೊರತುಪಡಿಸಿ) ಮಿಕ್ಕವರಾರೂ ಆಡದಿರುವುದು ದುರಂತ ಎನಿಸಿದೆ. ಬ್ಯಾಟ್ಸ್ ಮನ್ ಗಳೇ ಆಡದಿದ್ದರೆ ಇನ್ನು ಬೌಲರ್ ಗಳು ಆಡಿ ಗೆಲ್ಲಿಸಬೇಕಾ? ಇಲ್ಲಿರುವ ಬ್ಯಾಟ್ಸ್ ಮನ್ ಗಳೇನೂ ಕಡಿಮೆ ವಜನ್ ಇರುವವರಲ್ಲವಲ್ಲ? ಎಲ್ಲರೂ ವಿಶ್ವವಿಖ್ಯಾತ ಬ್ಯಾಟ್ಸ್ ಮನ್ ಗಳೇ. ಹಾಗಿದ್ದರೂ, ಇತ್ತೀಚೆಗಿನ ಪಂದ್ಯಗಳಲ್ಲಿ ತೀರಾ ಕಳಪೆ ಆಟ ಪ್ರದರ್ಶಿಸುತ್ತಿರುವುದು ತೀರಾ ವಿಪರ್ಯಾಸ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications