ಮುಂಬೈ ಇಂಡಿಯನ್ಸ್ ಸೋಲಿಗೆ 5 ಪ್ರಮುಖ ಕಾರಣಗಳು
ಗುರುವಾರ ರಾತ್ರಿ, ಪುಣೆಯಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಗೆಲವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಆದರೆ, ಆನಂತರ ಬ್ಯಾಟಿಂಗ್ ನಡೆಸಿದ ಪುಣೆ, 19.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 187 ರನ್ ಪೇರಿಸುವ ಮೂಲಕ ಗೆಲುವಿನ ಗೆರೆ ಮುಟ್ಟಿತು.
54 ಎಸೆತಗಳಲ್ಲಿ 84 ರನ್ ಸಿಡಿಸಿದ ಸ್ಟೀವನ್ ಸ್ಮಿತ್, ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರಲ್ಲದೆ, ಈ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಗೌರವವನ್ನೂ ಪಡೆದರು.
ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ, ಮುಂಬೈ ತಂಡವು ಈ ಪಂದ್ಯದಲ್ಲಿ ಸೋಲಲು ಕಾರಣ ಐದು ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮುಳುವಾಯ್ತು ಬ್ಯಾಟಿಂಗ್ ಕುಸಿತ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ, ಆ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಇದು ಟಿ20 ಪಂದ್ಯವಾದ್ದರಿಂದ ಆರಂಭಿಕರ ಪಾತ್ರ ತುಂಬಾ ಗಣನೀಯವಾಗಿರುತ್ತದೆ. ಅಕಸ್ಮಾತ್ ಆರಂಭಿಕರು ಎಡವಿದರೂ ಮಧ್ಯಮ ಕ್ರಮಾಂಕವು ತಂಡದ ಇನಿಂಗ್ಸ್ ಅನ್ನು ಮೇಲೆತ್ತಬೇಕಾಗುತ್ತದೆ. ಆದರೆ, ಈ ಪಂದ್ಯದಲ್ಲಿ ಮುಂಬೈ ತಂಡದ ಕಥೆ ಹಾಗಾಗಲಿಲ್ಲ.

ನಾಯಕನದ್ದೂ ವೈಫಲ್ಯ
ಮುಂಬೈ ತಂಡದ ಆರಂಭಿಕ ಪಾರ್ಥಿವ್ ಪಟೇಲ್ ಬೇಗನೇ ಔಟಾಗಿದ್ದು ಹಾಗೂ ಅವರ ಸ್ಥಾನಕ್ಕೆ ಬಂದ ನಾಯಕ ರೋಹಿತ್ ಶರ್ಮಾ ಕೂಡ ಬೇಗನೇ ಪೆವಿಲಿಯನ್ ಗೆ ಮರಳಿದ್ದು ತಂಡಕ್ಕೆ ಆರಂಭಿಕ ಹೊಡೆತವೇ ಸರಿ. ಅಂತೆಯೇ, ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಮತ್ತೊಬ್ಬ ಆರಂಭಿಕ ಜೋಸ್ ಬಟ್ಲರ್ ಕೂಡ 7ನೇ ಓವರ್ ನಲ್ಲೇ ಕ್ರೀಸ್ ತೊರೆದಿದ್ದು ತಂಡದ ರನ್ ಗತಿಗೆ ಕಡಿವಾಣ ಬೀಳಲು ಕಾರಣ.

ತಂಡಕ್ಕೆ ಗೌರವ ಮೊತ್ತ
ಕೆಳ ಹಂತದಲ್ಲಿ ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೌರವದ ಮೊತ್ತ ತಂದರಾದರೂ, ಆರಂಭಿಕರ, ಮಧ್ಯಮ ಕ್ರಮಾಂಕದ ಕಾಣಿಕೆ ಉತ್ತಮವಾಗಿದ್ದಿದ್ದರೆ ತಂಡದ ಮೊತ್ತ 200 ಗಡಿ ದಾಟಿಸಬಹುದಿತ್ತು ಹಾಗೂ ಪುಣೆಗೆ ಒಂದು ಸವಾಲಿನ ಗುರಿ ನೀಡಲು ಸಾಧ್ಯವಾಗುತ್ತಿತ್ತು.

ಆರಂಭದಲ್ಲಿ ಮಾತ್ರ ಯಶಸ್ಸು
ಬೌಲಿಂಗ್ ವಿಚಾರಕ್ಕೆ ಬಂದಾಗ, ಆರಂಭದಲ್ಲಿಯೇ ಮಯಾಂಕ್ ಅಗರ್ವಾಲ್ ಅವರನ್ನು ಬೇಗನೇ ಪೆವಿಲಿಯನ್ ಗೆ ಅಟ್ಟಿದರೂ, ಮತ್ತೊಬ್ಬ ಆರಂಭಿಕ ಅಜಿಂಕ್ಯ ರಹಾನೆ ಹಾಗೂ ನಾಯಕ ಸ್ಟೀವನ್ ಸ್ಮಿತ್ ಅವರ ಜೋಡಿ ಗಟ್ಟಿಯಾಗಿ ಕ್ರೀಸ್ ಕಚ್ಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಮತ್ತೊಂದು ಪ್ರಮಾದ.
ಈ ಜೋಡಿ, ಮೂರನೇ ವಿಕೆಟ್ ಗೆ 7 ಓವರ್ ಗಳಿಂದ 58 ರನ್ ಕಲೆಹಾಕಿ ಇನಿಂಗ್ಸ್ ಗೆ ತಿರುವನ್ನು ಕೊಟ್ಟಿತು. ಅದರಲ್ಲೂ ಸ್ಮಿತ್ ಅವರನ್ನು ಕ್ರೀಸ್ ನಲ್ಲಿ ಬೇರೂವವರೆಗೂ ಬಿಟ್ಟಿದ್ದು ಮುಂಬೈ ತಂಡದ ಮತ್ತೊಂದು ಪ್ರಮಾದ.

ಗೆಲುವಿನ ರೂವಾರಿಯಾದ ಸ್ಮಿತ್
ಹಾಗೆ, ರಹಾನೆ ಜತೆಗೆ 3ನೇ ವಿಕೆಟ್ ಗೆ 58 ರನ್ ಕಲೆಹಾಕಿದ ಸ್ಮಿತ್, 4ನೇ ವಿಕೆಟ್ ಗೆ ಬೆನ್ ಸ್ಟೋಕ್ಸ್ ಜತೆಗೂಡಿ ಕೇವಲ 5.1 ಓವರ್ ಗಳಲ್ಲಿ 50 ರನ್ ಕೂಡಿಸಿದರು. ಆನಂತರ, ಧೋನಿ ಜತೆಗೆ 4.3 ಓವರ್ ಗಳಲ್ಲಿ ಮುರಿಯದ 4ನೇ ವಿಕೆಟ್್ ಗೆ ಅಜೇಯ 44 ರನ್ ಜತೆಯಾಟ ನೀಡಿ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
ಇದೇ ಮುಂಬೈ ತಂಡಕ್ಕೆ ತೊಂದರೆ ನೀಡಿದ್ದು. ಸ್ಮಿತ್ ಅವರನ್ನು ಬೇಗನ್ ಕ್ರೀಸ್ ನಿಂದ ಹೊರಹಾಕಿದ್ದರೆ, ರಹಾನೆಯವರ ಆಟಕ್ಕೆ ಬೇಗನೇ ಕಡಿವಾಣ ಹಾಕಿದ್ದರೆ ಒಂದು ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಮುಂಬೈ ತಂಡಕ್ಕೆ ಸೋಲುವ ಸ್ಥಿತಿ ಬರುತ್ತಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications