
ಕ್ರಿಸ್ ಗೇಲ್ ಗುಡುಗು- ಸಿಡಿಲು
2014ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪುಣೆ ವಾರಿಯರ್ಸ್ ವಿರುದ್ಧ ಪೇರಿಸಿದ 263 ರನ್ (5 ವಿಕೆಟ್ ನಷ್ಟಕ್ಕೆ ) ಈ ವರೆಗಿನ ಐಪಿಎಲ್ ನಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಆ ವರ್ಷ ಏಪ್ರಿಲ್ 23ರಂದು ನಡೆದಿದ್ದ ಈ ಪಂದ್ಯದಲ್ಲಿ, ಆರ್ ಸಿಬಿ ತಂಡದ ಕ್ರಿಸ್ ಗೇಲ್ ಅವರು, ಅಜೇಯ 175 ರನ್ ಬಾರಿಸಿದ್ದರು. ಇದು ಐಪಿಎಲ್ ನಲ್ಲಿ ಬ್ಯಾಟ್ಸ್ ಮನ್ ಒಬ್ಬ ವೈಯಕ್ತಿಕವಾಗಿಯೂ ಗಳಿಸಿದ ದೊಡ್ಡ ಮೊತ್ತ. ಅತಿ ವೇಗದ ಶತಕವೂ (30 ಎಸೆತಗಳಲ್ಲಿ) ಹೌದು.
ಆ ಪಂದ್ಯದಲ್ಲಿ ಆರ್ ಸಿಬಿ ತಂಡ, ಪುಣೆ ತಂಡವನ್ನು 130 ರನ್ ಗಳಿಂದ ಮಣಿಸಿತ್ತು.

ಆರ್ ಸಿಬಿ ವಿರುದ್ಧ ಗುಜರಾತ್ ಲಯನ್ಸ್
2016ರ ಮೇ 14ರಂದು ನಡೆದಿದ್ದ ಈ ಪಂದ್ಯದಲ್ಲಿ ಆರ್ ಸಿಬಿಯ ಪ್ರಮುಖ ಬ್ಯಾಟಿಂಗ್ ಸ್ಟಾರ್ ಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್, ಪ್ರತ್ಯೇಕವಾಗಿ ಶತಕಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತ 20 ಓವರ್ ಗಳಲ್ಲಿ 248 ರನ್ ಪೇರಿಸಲು (3 ವಿಕೆಟ್ ನಷ್ಟಕ್ಕೆ) ಕಾರಣರಾದರು. ಇದಕ್ಕೆ ಪ್ರತಿಯಾಗಿ, ಗುಜರಾತ್ ಲಯನ್ಸ್ ತಂಡ, 18.4 ಓವರ್ ಗಳಲ್ಲಿ 104 ರನ್ ಗಳಿಗೆ ಸರ್ವ ಪತನ ಕಂಡು, ಆರ್ ಸಿಬಿಯು 144 ರನ್ ಗಳ ಗೆಲವು ಸಾಧಿಸಿತು.

ಮಿಂಚಿನ ಮುರಳಿ ವಿಜಯ್
2010ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ 2ನೇ ಗರಿಷ್ಠ ಮೊತ್ತ. ಚೆನ್ನೈ ತಂಡದ ಮುರಳಿ ವಿಜಯ್ 127 ರನ್ ಗಳಿಸಿದ್ದು, ಕಡೆಯ 10 ಓವರ್ ಗಳಲ್ಲಿ ಚೆನ್ನೈ ತಂಡ 155 ರನ್ ಗಳಿಸಿದ್ದು, ಪಂದ್ಯದ ಪ್ರಮುಖ ಹೈಲೈಟ್ಸ್.
ಈ ಪಂದ್ಯದಲ್ಲಿ ಚೆನ್ನೈ ತಂಡ, 27 ರನ್ ಗಳಿಂದ ಜಯ ಸಾಧಿಸಿತ್ತು.

ಮೈಕಲ್ ಹಸ್ಸಿ ಶತಕ
2008ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 240 ರನ್ ಗಳಿಸಿದ್ದು ಐಪಿಎಲ್ ಇತಿಹಾಸದಲ್ಲಿ ಈವರೆಗಿನ 3ನೇ ಗರಿಷ್ಠ ಸ್ಕೋರ್ ಎನಿಸಿದೆ. ಚೆನ್ನೈ ತಂಡದ ಪರವಾಗಿ ಮೈಕಲ್ ಹಸ್ಸಿ ಶತಕ ಸಿಡಿಸಿದ್ದು ಈ ಪಂದ್ಯದ ಹೈಲೈಟ್.
ಈ ಪಂದ್ಯದಲ್ಲಿ ಸಿಎಸ್ ಕೆ ತಂಡ, 33 ರನ್ ಗಳಿಂದ ಗೆಲುವು ಸಾಧಿಸಿತ್ತು.

ಎಬಿಡಿ ಶತಕ
2015ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್ ಸಿಬಿ ದಾಖಲಿಸಿದ 235 ರನ್ ಮೊತ್ತ ಐಪಿಎಲ್ ಇತಿಹಾಸದ 4ನೇ ಗರಿಷ್ಠ ಮೊತ್ತ ಎಂದೆನಿಸಿದೆ. ಕೇವಲ ಒಂದು ವಿಕೆಟ್ ನಷ್ಟಕ್ಕೆ ಆರ್ ಸಿಬಿ ಈ ಮೊತ್ತ ದಾಖಲಿಸಿದ್ದು, ಮೊದಲ ವಿಕೆಟ್ ಗೆ ನಾಯಕ ವಿರಾಟ್ ಕೊಹ್ಲಿ (82 ರನ್, 50 ಎಸೆತ) ಹಾಗೂ ಎಬಿ ಡಿವಿಲಿಯರ್ಸ್ (ಅಜೇಯ 133 ರನ್, 59 ಎಸೆತ) 215 ರನ್ ಗಳ ಜತೆಯಾಟ ನೀಡಿದ್ದು ಈ ಪಂದ್ಯದ ಹೈಲೈಟ್ಸ್.
ಆ ಪಂದ್ಯದಲ್ಲಿ ಆರ್ ಸಿಬಿ 39 ರನ್ ಅಂತರದ ಜಯ ಸಾಧಿಸಿತ್ತು.

ಆ್ಯಡಮ್ ಗಿಲ್ ಕ್ರಿಸ್ಟ್ ಭರ್ಜರಿ ಬ್ಯಾಟಿಂಗ್
ಆ್ಯಡಮ್ ಗಿಲ್ ಕ್ರಿಸ್ಟ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ (55 ಎಸೆತ, 106 ರನ್) ಪಂಜಾಬ್ ತಂಡ, ಆರ್ ಸಿಬಿ ವಿರುದ್ಧ 2011ರ ಆವೃತ್ತಿಯ ಮೇ 17ರಂದು ನಡೆದಿದ್ದ ಈ ಪಂದ್ಯದಲ್ಲಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 232 ರನ್ ಪೇರಿಸಿತ್ತು. ಈ ಮೊತ್ತ ಐಪಿಎಲ್ ನಲ್ಲಿ ಈವರೆಗೆ ತಂಡವೊಂದು ದಾಖಲಿಸಿರುವ 5ನೇ ಗರಿಷ್ಠ ಮೊತ್ತ.
ಈ ಮೊತ್ತವನ್ನು ಹಿಂದಿಕ್ಕುವ ಭರದಲ್ಲಿ ಆರ್ ಸಿಬಿ, 17 ಓವರ್ ಗಳಲ್ಲಿ 127 ರನ್ ಗಳಿಗೆ ಆಲೌಟ್ ಆಗಿ, 111 ರನ್ ಗಳ ಸೋಲನುಭವಿಸಿತ್ತು.

ಮ್ಯಾಕ್ಸ್ ವೆಲ್ ಮ್ಯಾಕಿಮಮ್ ಪರ್ಫಾಮನ್ಸ್
ಗ್ಲೆನ್ ಮ್ಯಾಕ್ಸ್ ವೆಲ್ ಅವರ ಆಕರ್ಷಕ ಬ್ಯಾಟಿಂಗ್ (38 ಎಸೆತ, 90 ರನ್), ಪಂಜಾಬ್ ತಂಡ, 2017ರ ಮೇ 14ರಂದು ನಡೆದಿದ್ದ ಚೆನ್ನೈ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು. ಇದು ಈವರೆಗಿನ ಐಪಿಎಲ್ ನ 6ನೇ ಗರಿಷ್ಠ ಮೊತ್ತವಾಗಿದೆ. ಈ ಮೊತ್ತವನ್ನು ಹಿಂದಿಕ್ಕಲು ಯತ್ನಿಸಿದ ಚೆನ್ನೈ, 20 ಓವರ್ ಗಳಲ್ಲಿ 6 ವಿಕೆಟ್ ಗೆ 187 ರನ್ ಮಾತ್ರ ಗಳಿಸಿ 44 ರನ್ ಗಳ ಸೋಲು ಕಂಡಿತ್ತು.

ಡೇವಿಡ್ ವಾರ್ನರ್ ಗುಡುಗು
ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರಿಂದಾಗಿ ಡೆಲ್ಲಿ ತಂಡ, 2011ರ ಏಪ್ರಿಲ್ 23ರಂದು ನಡೆದಿದ್ದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು. ಇದು ಈವರೆಗಿನ ಐಪಿಎಲ್ ನಲ್ಲಿ 7ನೇ ಗರಿಷ್ಠ ಮೊತ್ತ. ಆನಂತರ ಬ್ಯಾಟಿಂಗ್ ನಡೆಸಿದ್ದ ಪಂಜಾಬ್, 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 202 ರನ್ ಮಾತ್ರ ಗಳಿಸಿ, 29 ರನ್ ಗಳ ಸೋಲು ಕಂಡಿತು.

ಕೊಹ್ಲಿ ಮಿಂಚು
2016ರ ಏಪ್ರಿಲ್ 12ರಂದು ನಡೆದಿದ್ದ ಪಂದ್ಯದಲ್ಲಿ ಆರ್ ಸಿಬಿ ಪರವಾಗಿ ಮಿಂಚಿದ್ದ ಎಬಿ ಡಿವಿಲಿಯರ್ಸ್ (82), ವಿರಾಟ್ ಕೊಹ್ಲಿ (75) ತಂಡದ ಮೊತ್ತವನ್ನು 227ಕ್ಕೆ (ನಾಲ್ಕು ವಿಕೆಟ್ ನಷ್ಟಕ್ಕೆ) ತಂದು ಮುಟ್ಟಿಸಿದ್ದರು. ಇದು ಈವೆರೆಗಿನ ಐಪಿಎಲ್ ನಲ್ಲಿ 8ನೇ ಗರಿಷ್ಠ ಮೊತ್ತ.
ಈ ಮೊತ್ತ ಹಿಂದಿಕ್ಕುವ ಭರದಲ್ಲಿ ಸನ್ ರೈಸರ್ಸ್ ಪಡೆ, 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ, 45 ರನ್ ಗಳ ಸೋಲೊಪ್ಪಿಕೊಂಡಿತು.

ಮತ್ತೆ ಗೇಲ್ ಅಬ್ಬರ
ಕ್ರಿಸ್ ಗೇಲ್ ಅವರ ಅಬ್ಬರದ ಬ್ಯಾಟಿಂಗ್ (57 ಎಸೆತಗಳಲ್ಲಿ 117) ಸಹಾಯಿದಿಂದಾಗಿ, 2015ರ ಮೇ 6ರಂದು ನಡೆದಿದ್ದ ಪಂದ್ಯದಲ್ಲಿ ಆರ್ ಸಿಬಿ ತಂಡ, ಪಂಜಾಬ್ ವಿರುದ್ಧ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತ್ತು. ಇದು ಈವರೆಗಿನ ಐಪಿಎಲ್ ನಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ 8ನೇ ಮೊತ್ತ. ಇದಕ್ಕೆ ಉತ್ತರವಾಗಿ, ಪಂಜಾಬ್ ತಂಡ, ಕೇವಲ 88 ರನ್ ಗಳಿಗೆ ಆಲೌಟ್ ಆಗಿ, 138 ರನ್ ಗಳ ಪರಾಭವ ಹೊಂದಿತು. ಆರ್ ಸಿಬಿ ಪರವಾಗಿ, ಮಿಚೆಲ್ ಸ್ಟಾರ್ಕ್ ಹಾಗೂ ಶ್ರೀನಾಥ್ ಅರವಿಂದ್ ಅವರು, ತಲಾ ನಾಲ್ಕು ವಿಕೆಟ್ ಗಳಿಸಿ ಪಂಜಾಬ್ ತಂಡದ ಅಂದಿನ ದುಸ್ಥಿತಿಗೆ ಕಾರಣವಾಗಿದ್ದರು.

ಸೆಹ್ವಾಗ್ ಸಿಡಿಲಬ್ಬರದ ಬ್ಯಾಟಿಂಗ್
2014ರ 2ನೇ ಕ್ವಾಲಿಫೈಯರ್ ಆಗಿದ್ದ ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರ (58 ಎಸೆತಗಳಲ್ಲಿ 122 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದಾಗಿ ಪಂಜಾಬ್ ತಂಡ, ಚೆನ್ನೈ ವಿರುದ್ಧ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತ್ತು. ಈ ಮೊತ್ತವನ್ನು ಹಿಂದಿಕ್ಕುವ ಭರದಲ್ಲಿ ಚೆನ್ನೈ ತಂಡ, 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 202 ರನ್ ಮಾತ್ರ ಗಳಿಸಿ, 24 ರನ್ ಗಳಿಂದ ಪಂದ್ಯ ಸೋತಿತ್ತು. ಈ ಪಂದ್ಯದಲ್ಲಿನ ಪಂಜಾಬ್ ತಂಡ ದಾಖಲಿಸಿದ ಮೊತ್ತ, ಈವರೆಗಿನ ಐಪಿಎಲ್ ನಲ್ಲಿ 10ನೇ ಗರಿಷ್ಠ ಮೊತ್ತವೆಂದು ಪರಿಗಣಿಸಲ್ಪಟ್ಟಿದೆ.


Click it and Unblock the Notifications