ಭಾನುವಾರ ಮುಕ್ತಾಯಗೊಂಡ ಐಪಿಎಲ್ 10ನೇ ಆವೃತ್ತಿಯ ಪಂದ್ಯಾವಳಿಯನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಬಗ್ಗೆ ಟ್ವಿಟರ್ ಲೋಕದಲ್ಲಿ ಭಾರೀ ಅಭಿನಂದನೆಗಳು ಹರಿದುಬಂದಿವೆ.
ಹೈದರಾಬಾದ್ ನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಕೇವಲ 1 ರನ್ ನಿಂದ ರೋಚಕವಾಗಿ ಸೋಲಿಸಿ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು.
ಪಂದ್ಯದ ಕೊನೆಯ ನಿಮಿಷಗಳಲ್ಲಿ ಭಾರೀ ಕುತೂಹಲ ಕೆರಳಿಸಿದ್ದ, ಅದರಲ್ಲೂ ಕೊನೆಯ ಓವರ್ ನಲ್ಲಿ ಪ್ರತಿ ಕ್ಷಣಕ್ಕೂ ರೋಮಾಂಚನ ಎನಿಸಿದ ಈ ಪಂದ್ಯವನ್ನು ಗೆದ್ದ ಮುಂಬೈಗೆ ಮಾಜಿ ಕ್ರಿಕೆಟಿಗರು, ಬಾಲಿವುಡ್ ನಟರು ಅಭಿನಂದನೆ ಸಲ್ಲಿಸಿದ್ದಾರೆ. ಆ ಅಭಿನಂದನೆಗಳ ಆಯ್ದ ಟ್ವೀಟ್ ಗಳು ಇಲ್ಲಿವೆ.

ವೀರೇಂದ್ರ ಸೆಹ್ವಾಗ್ ಅಭಿಮತ
ಭರ್ಜರಿ ಹಾಗೂ ರೋಮಾಂಚಕ ಜಯವನ್ನು ಪಡೆದಿದ್ದಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಭಿನಂದನೆ. ಈ ಅಭಿನಂದನೆಗಳು ಮುಂಬೈಗೆ ಮಾತ್ರವಲ್ಲ, ಒಂದು ರೋಚಕ ಪಂದ್ಯ ಕಟ್ಟಿಕೊಂಡ ಪುಣೆಯ ಹೋರಾಟಕ್ಕೂ ಸಲ್ಲುತ್ತವೆ ಎಂದಿದ್ದಾರೆ.
ರೈನಾ ಮನದಾಳದ ನುಡಿ
ಈ ಹಿಂದಿನ ಐಪಿಎಲ್ ಫೈನಲ್ ಗಳಿಗಿಂತ ಹೆಚ್ಚು ಆಸಕ್ತಿದಾಯಕವಾಗಿದ್ದ ಪಂದ್ಯವಿದು. ಎಷ್ಟು ರೋಚಕ? ಮುಂಬೈ ತಂಡಕ್ಕೆ ಅಭಿನಂದನೆಗಳು.
ಹಾಡಿ ಹೊಗಳಿದ ಸರ್ ಜಡೇಜಾ
ಉತ್ತಮ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್ ಮುಕ್ತಾಯಗೊಂಡಿದೆ. ಮುಂಬೈಗೆ ಅಭಿನಂದನೆ. ಆ ಗೆಲುವಿನ ನಗೆ ನೋಡಲು ಖುಷಿಯೆನಿಸುತ್ತದೆ.
ಬಾಲಿವುಡ್ ನಟ ರಣವೀರ್ ಅಭಿನಂದನೆ
ವೀ... ಆರ್.... ದ ಚಾಂಪಿಯನ್ಸ್...... ತಮ್ಮದೊಂದು ಪುಟ್ಟ ವಿಡಿಯೋ ತುಣುಕನ್ನು ಟ್ವೀಟ್ ಮಾಡಿರುವ ಅವರು, ಅದರಲ್ಲಿ ನಾವೇ (ಮುಂಬೈ) ಚಾಂಪಿಯನ್ ಎಂದು ಹರ್ಷದಿಂದ ಕೂಗಿದ್ದಾರೆ.
ಇರ್ಫಾನ್ ಪಠಾಣ್ ಹೇಳಿದ್ದು...
ಇದೆಂಥಾ ಕ್ರಿಕೆಟ್ ಪಂದ್ಯ... ಮುಂಬೈ ತಂಡ ಮತ್ತೊಮ್ಮೆ ಐಪಿಎಲ್ ಗೆದ್ದಿರುವುದು ಅದರ ಪರಿಶ್ರಮದಿಂದ.
ವಿವಿಎಸ್ ಲಕ್ಷಣ್ ಅಭಿನಂದಿಸಿದ್ದು ಹೀಗೆ
ಎಂಥಾ ಬ್ರಿಲಿಯಂಟ್ ಪಂದ್ಯವಿದು. ಮುಂಬೈ ಇಂಡಿಯನ್ಸ್ ತಂಡಕ್ಕೆ ಅಭಿನಂದನೆಗಳು.
ಸನತ್ ಜಯಸೂರ್ಯ ಹರ್ಷ
ಎಂಥಾ ಪಂದ್ಯವಿದು! ಮುಂಬೈ ಇಂಡಿಯನ್ಸ್ ತಂಡಕ್ಕೆ ಅಭಿನಂದನೆಗಳು. ಮುಂಬೈ ತಂಡಕ್ಕೆ ಮುಂಬೈ ತಂಡವೇ ಸಾಟಿ.