
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಅಭಿಮಾನಿಗಳಿಗೆ ಸಾಕಷ್ಟು ರಸದೌತಣವನ್ನು ನೀಡಿತ್ತು. ಎಬಿ ಡಿವಿಲಿಯರ್ಸ್ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡಿದರು. ಆದರೆ ನಿನ್ನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇನ್ನೋರ್ವ ಆಟಗಾರ ಆರೋನ್ ಫಿಂಚ್ ರಸೆಲ್ ಬೌಲಿಂಗ್‌ಗೆ ಉತ್ತರಿಸಲು ಸಾಧ್ಯವಾಗದೆ ಅವಾಚ್ಯ ಪದವೊಂದನ್ನು ಬಳಸಿದ್ದು ಮೈಕ್‌ನಲ್ಲಿ ದಾಖಲಾಗಿತ್ತು.
ಈ ಘಟನೆ ನಡೆದಿದ್ದು ಆರ್‌ಸಿಬಿ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ. ಇನ್ನಿಂಗ್ಸ್‌ನ ಆರನೇ ಓವರ್‌ಅನ್ನು ಕೆಕೆಆರ್‌ನ ಆಲ್‌ರೌಂಡರ್ ಆಂಡ್ರೆ ರಸೆಲ್ ಬೌಲಿಂಗ್ ಮಾಡುತ್ತಿದ್ದರು. ನಿಧಾನದಲ್ಲಿ ಬಂದ ಶಾರ್ಟ್ ಎಸೆತವನ್ನು ಬಾರಿಸಲು ಕ್ರೀಸ್‌ನಲ್ಲಿದ್ದ ಆರೋನ್ ಫಿಂಚ್‌ಗೆ ಸಾಧ್ಯವಾಗಲಿಲ್ಲ. ಆಗ ಫಿಂಚ್ "ಒಹ್ ಯು ಬಾ**ರ್ಡ್" ಎಂದು ಅವಾಚ್ಯ ಪದದ ಮೂಲಕ ಹತಾಶೆಯನ್ನು ವ್ಯಕ್ತಪಡಿಸಿದರು.
ಇಲ್ಲಿ ಆರೋನ್ ಫಿಂಚ್ ಬೌಲಿಂಗ್ ನಡೆಸುತ್ತಿದ್ದ ಆಂಡ್ರೆ ರಸ್ಸೆಲ್ ಅವರನ್ನಾಗಲಿ ಅಥವಾ ಇನ್ನಾವುದೇ ಆಟಗಾರರನ್ನಾಗಲಿ ಉದ್ದೇಶಿಸಿ ಆಡಿದ ಮಾತು ಆಗಿರಲಿಲ್ಲ. ಒತ್ತಡದಲ್ಲಿ ಹತಾಶರಾಗಿ ಈ ಮಾತು ಹೊರಬಂದಿದ್ದು ಸ್ಪಷ್ಟವಾಗಿತ್ತು. ಆದರೆ ಕಾಮೆಂಟೇಟರ್ ಫಿಂಚ್ ಆಡಿದ ಮಾತು ವೀಕ್ಷಕರಿಗೆ ಸರಿಯಾಗಿ ಕೇಳಿಸಿರಲಾರದು ಎಂದು ಆಡಿದ ಮಾತಿನ ಬಗ್ಗೆ ವಿವರಣೆಯನ್ನು ನೀಡಲು ಆರಂಭಿಸಿದ್ದರು. ಇದಕ್ಕಾಗಿ ಆಕ್ಷೇಪಣೆಗಳು ವ್ಯಕ್ತವಾಗಿದೆ.
— faceplatter49 (@faceplatter49) October 12, 2020
ಈ ಬಾರಿಯ ಐಪಿಎಲ್‌ಅನ್ನು ವೀಕ್ಷಕರ ಅನುಪಸ್ಥಿತಿಯಲ್ಲಿ ಆಡಿಸಲಾಗುತ್ತಿದೆ. ಹಾಗಾಗಿ ಗದ್ದಲಗಳು ಕ್ರೀಡಾಂಗಣದಲ್ಲಿ ಅಷ್ಟಾಗಿಲ್ಲ. ಹಾಗಾಗಿ ವಿಕೆಟ್ ಹಿಂಬಾಗದಲ್ಲಿರುವ ಮೈಕ್‌ನಲ್ಲಿ ಆಟಗಾರರ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತದೆ. ಆದರೆ ಮೈದಾನದಲ್ಲಿ ಆಟಗಾರರು ಆಡುವ ಕೆಲ ಅನವಶ್ಯಕ ಮಾತುಗಳು ಈ ಮೈಕ್‌ಗಳ ಮೂಲಕ ವೀಕ್ಷಕರನ್ನು ತಲುಪುತ್ತದೆ. ಆಟಗಾರರು ಮೈಕ್‌ನ ಬಳಿಯಲ್ಲಿದ್ದಾಗ ಆಡುವ ಮಾತಿನ ಬಗ್ಗೆ ನಿಗಾವನ್ನು ವಹಿಸುವ ಜೊತೆಗೆ ಇಂತಾ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರರು ಕೂಡ ತಮ್ಮ ಜವಾಬ್ಧಾರಿಯನ್ನು ಅರಿತರೆ ಉತ್ತಮ ಎಂಬುದು ಅಭಿಮಾನಿಗಳ ಅಭಿಪ್ರಾಯ.
ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಸಹ ಆಟಗಾರನಿಗೆ ಕನ್ನಡದಲ್ಲಿ ಆಡಿದ ಮಾತು ಮೈಕ್‌ನಲ್ಲಿ ಕೇಳಿಸಿತ್ತು. ಈ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಟ್ವಿಟ್ಟರ್‌ನಲ್ಲಿ ಆಟಗಾರರಿಗೆ " ಸ್ಟಂಪ್ ಮೈಕ್ ಹತ್ರ ಇರುವಾಗ ಸ್ವಲ್ಪ ನೋಡ್ಕೊಂಡು ಮಾತಾಡ್ರೋ ಹುಡುಗ್ರಾ " ಸಲಹೆಯನ್ನು ನೀಡಿದ್ದನ್ನು ನಾವು ನೆನಪಿಸಿಕೊಳ್ಳಬಹುದು.