
ಕೋಲ್ಕತಾ ನೈಟ್ ರೈಡರ್ಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರು ಐಪಿಎಲ್ 2020ರಲ್ಲಿ ತಮ್ಮ ನೈಜ ಆಟ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಮೊತ್ತಕ್ಕೆ ರಸ್ಸೆಲ್ ರನ್ನು ಖರೀದಿಸಿರುವ ಕೆಕೆಆರ್ ಬಗ್ಗೆ ಅನುಕಂಪ ತೋರಿರುವ ಫ್ಯಾನ್ಸ್, ರಸ್ಸೆಲ್ ತಮ್ಮ ಎಂದಿನ ಲಯ ಕಂಡು ಕೊಳ್ಳಲು ಉಪಾಯ ಹುಡುಕಿದ್ದಾರೆ. ಅದರೆ, ಸಭ್ಯತೆ ಮರೆತು ರಸ್ಸೆಲ್ ಪತ್ನಿ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೊಂದಕ್ಕೆ ಕುಹಕಿಗಳು ಕಾಮೆಂಟ್ ಮಾಡಿದ್ದಾರೆ.
ಇದುವರೆಗೆ ಐದು ಪಂದ್ಯಗಳನ್ನು ಆಡಿರುವ ಆಂಡ್ರೆ ರಸ್ಸೆಲ್ ಕೇವಲ 50 ರನ್ ಗಳಿಸಿದ್ದಾರೆ. 11,24,13 ಹಾಗೂ 2 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 24. ಬ್ಯಾಟಿಂಗ್ ಸರಾಸರಿ 12.50 ಮಾತ್ರ. ಬೌಲಿಂಗ್‌ನಲ್ಲಿ ಉತ್ತಮವಾಗಿದ್ದರೂ ನಿಯಮಿತವಾಗಿ ವಿಕೆಟ್ ಪಡೆದಿಲ್ಲ. ಈ ಐದು ಪಂದ್ಯಗಳಲ್ಲಿ ಅವರು ಐದು ವಿಕೆಟ್ ಪಡೆದಿದ್ದಾರೆ. 29 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವಿಫಲರಾಗಿರುವ ರಸ್ಸೆಲ್ ಅವರಿಗೆ ಸ್ಫೂರ್ತಿ ತುಂಬಲು ನೀವು ದುಬೈಗೆ ಹೋಗಿ ಎಂದು ಹೇಳಲು ಹೊರಟ ಫ್ಯಾನ್, ರಸ್ಸೆಲ್ ಪತ್ನಿ ಜೆಸ್ಸಿ ಲೋರಾ ಅವರನ್ನು ಆಂಟಿ ಎಂದು ಕರೆದು, ನೀವು ದುಬೈಗೆ ಹೋಗಿ ರಸ್ಸೆಲ್ ಒಳ್ಳೆ ಫಾರ್ಮ್ ನಲ್ಲಿಲ್ಲ (Jassym aunty please go to Dubai Russell is not in good form) ಎಂದು ಬರೆದಿದ್ದಾರೆ.
ರಸ್ಸೆಲ್ ಪತ್ನಿ ಜಸ್ಸಿ ಲೋರಾ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದ ಇಂಥದ್ದೊಂದು ಕಾಮೆಂಟ್ ಬಗ್ಗೆ ಪ್ರತಿಕ್ರಿಯಿಸಿ, ''ಅವರು(ರಸ್ಸೆಲ್) ಉತ್ತಮ ಫಾರ್ಮ್ ನಲ್ಲಿದ್ದಾರೆ..'' ಎಂದು ಹಾಕಿದ್ದಾರೆ. ಅಂದರೆ ನನ್ನ ಪತಿ ಪ್ರಸ್ತುತ ಫಾರ್ಮ್ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಅವರು ದುಬೈಗೆ ಹೋಗಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕರೋನಾ ವೈರಸ್ ನಿಯಮ ಗಮನದಲ್ಲಿಟ್ಟುಕೊಂಡು ಬಯೋಸೆಕ್ಯೂರ್ ಬಬಲ್ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾವಳಿಗಳ ಸಂದರ್ಭದಲ್ಲಿ ಹಲವಾರು ಕ್ರಿಕೆಟರ್ ಗಳು ತಮ್ಮ ಆಪ್ತರು, ಕುಟುಂಬಸ್ಥರನ್ನು ಯುಎಇಗೆ ಕರೆಸಿಕೊಂಡಿಲ್ಲ. ಒಂದು ವೇಳೆ ಕರೆಸಿಕೊಂಡಿದ್ದರೂ ಬಯೋ ಬಬ್ಬಲ್ ಬೇಲಿ ದಾಟಿ ಹೋಗುವುದು ಕಷ್ಟವಾಗುತ್ತಿತ್ತು. ಕೊವಿಡ್ 19 ಹರಡದಂತೆ ನಿಯಂತ್ರಣ, ತಂಡದ ನಿರ್ವಹಣೆ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಾಕಷ್ಟು ಕಾಳಜಿ ವಹಿಸಿದ್ದು, ಇದಕ್ಕೆ ಯುಎಇ ಕ್ರಿಕೆಟ್ ಮಂಡಳಿ ಸಾಥ್ ನೀಡಿದೆ.