
ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್‌ನ ಯಶಸ್ಸಿನ ಬಳಿಕವೇ ವಾರ್ನರ್ ರಾಷ್ಟ್ರೀಯ ತಂಡದಲ್ಲೂ ಮಿಂಚುಹರಿಸಲು ಆರಂಭಿಸಿದ್ದರು. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ವಿಶೇಷ ಮೈಲಿಗಲ್ಲನ್ನು ಸ್ಥಾಪಿಸಲಿದ್ದಾರೆ ಡೇವಿಡ್ ವಾರ್ನರ್.
ಐಪಿಎಲ್‌ನಲ್ಲಿ ನಾಯಕನಾಗಿ ಡೇವಿಡ್ ವಾರ್ನರ್ 48ನೇ ಬಾರಿಗೆ ಮುನ್ನಡೆಸುತ್ತಿದ್ದಾರೆ. ಈ ಮೂಲಕ ವಿದೇಶಿ ಆಟಗಾರನಾಗಿ ಹೆಚ್ಚು ಬಾರಿ ನಾಯಕತ್ವ ವಹಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ವಾರ್ನರ್ ಮೂರನೇ ಸ್ಥಾನಕ್ಕೇರಲಿದ್ದಾರೆ. ಶ್ರೀಲಂಕಾದ ದಿಗ್ಗಜ ಆಟಗಾರ ಸಂಗಕ್ಕರ ಅವರನ್ನು ಹಿಂದಿಕ್ಕುವ ಮೂಲಕ ಈ ಸಾಧನೆಯನ್ನು ಮಾಡಲಿದ್ದಾರೆ ಡೇವಿಡ್ ವಾರ್ನರ್.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಂ ಗಿಲ್‌ಕ್ರಿಸ್ಟ್ ಮೊದಲ ಸ್ಥಾನದಲ್ಲಿದ್ದಾರೆ. ಗಿಲ್‌ಕ್ರಿಸ್ಟ್ 71 ಐಪಿಎಲ್ ಪಂದ್ಯಗಳಲ್ಲಿ ನಾಯಕತ್ವವನ್ನು ವಹಿಸಿಕೊಂಡು ಮುಂದಿದ್ದಾರೆ. ಎರಡನೇ ಸ್ಥಾನದಲ್ಲೂ ಆಸ್ಟ್ರೇಲಿಯಾದ ಮಾಜಿ ಆಟಗಾರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 55 ಪಂದ್ಯಗಳಿಗೆ ನಾಯಕತ್ವ ವಹಿಸಿರುವ ಶೇನ್ ವಾರ್ನ್ ಈ ಸಾಧನೆ ಮಾಡಿದ ಆಟಗಾರನಾಗಿದ್ದಾರೆ.
ಐಪಿಎಲ್‌ನಲ್ಲಿ ಇಂದು ಮೂರನೇ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಈ ಎರಡು ತಂಡಗಳು ಐಪಿಎಲ್‌ನಲ್ಲಿ ಈವರೆಗೆ 13 ಬಾರಿ ಮುಖಾಮುಖಿಯಾಗಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡ 7 ಗೆಲುವುಗಳನ್ನು ಸಾಧಿಸಿ ಈ ಎರಡು ತಂಡಗಳ ಮುಖಾಮುಖಿಯಲ್ಲಿ ಮುಂದಿದೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸಮಬಲಗೊಳಿಸುವ ಅವಕಾಶ ಕೊಹ್ಲಿ ಪಡೆಗೆ ಇದೆ.