ಐಪಿಎಲ್ 2020: ಕನ್ನಡಿಗರೇ ತುಂಬಿರುವ ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕಾಡುತ್ತಿದೆ 'ಆರ್‌ಸಿಬಿ'ಯ ಸಮಸ್ಯೆ!

ಐಪಿಎಲ್‌ನಲ್ಲಿ ಕನ್ನಡಿಗರೇ ಹೆಚ್ಚಾಗಿರುವ ಕಾರಣಕ್ಕೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಮೇಲೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚು ಪ್ರೀತಿ. ಕೋಚ್ ಅನಿಲ್ ಕುಂಬ್ಳೆ, ನಾಯಕ ಕೆ ಎಲ್ ರಾಹುಲ್ ಸಹಿತ ಒಟ್ಟು ಆರು ಜನ ಕನ್ನಡಿಗರು ಈ ತಂಡದಲ್ಲಿದ್ದಾರೆ. ಆದರೆ ಆ ಒಂದು ಸಮಸ್ಯೆಯಿಂದ ಇಡೀ ತಂಡ ಸಂಕಷ್ಟಕ್ಕೆ ಸಿಲುಕಿದೆ.
ಇಡೀ ತಂಡವೇ ತುಂಬಾ ಸಮತೋಲಿತ ತಂಡದಂತೆ ಕಾಣುತ್ತದೆ. ಬ್ಯಾಟಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿದೆ. ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರಿದ್ದಾರೆ. ಆದರೂ ತಂಡ ಗೆಲ್ಲಬಹುದಾಗಿರುವ ಪಂದ್ಯಗಳನ್ನು ಕೈಚೆಲ್ಲುತ್ತಿದೆ. ಅದಕ್ಕೆ ಕಾರಣವೂ ಇದೆ. ಬೆಂಗಳೂರು ಮೂಲದ ಐಪಿಎಲ್ ತಂಡ ಆರ್‌ಸಿಬಿ ಎದುರಿಸುತ್ತಿರುವ ಸಮಸ್ಯೆಯನ್ನೇ ಈಗ ಕಿಂಗ್ಸ್ ಇಲವೆನ್ ಪಂಜಾಬ್ ಕೂಡ ಎದುರಿಸುತ್ತಿದೆ.
ಹಾಗಾದರೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ ಸವಾಲಾಗಿರುವ ಆ ಸಮಸ್ಯೆ ಯಾವುದು ಮುಂದೆ ಓದಿ..

ಆರಂಭಿಕ ಜೋಡಿಯ ಶ್ರೇಷ್ಠ ಪ್ರದರ್ಶನ
ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿ ಆರಂಭಿಕರಾದ ಕನ್ನಡಿಗ ಜೋಡಿ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈ ಬಾರಿಯ ಅತಿ ಹೆಚ್ಚು ರನ್‌ಗಳಿಕೆಯ ಓಟದಲ್ಲಿ ಈ ಇಬ್ಬರು ಆಟಗಾರರೇ ಮುಂದಿರುವುದು ಇದಕ್ಕೆ ಸಾಕ್ಷಿ. ಇಬ್ಬರೂ ತಂಡಕ್ಕೆ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೌಲಿಂಗ್ ವಿಭಾಗವೂ ಬಲಿಷ್ಠ
ಕಿಂಗ್ಸ ಇಲವೆನ್ ಪಂಜಾಬ್ ತಂಡದಲ್ಲಿ ಅದ್ಭುತವಾದ ಬೌಲರ್‌ಗಳು ಇದ್ದಾರೆ. ಹೊಸ ಚೆಂಡಿನಲ್ಲಿ ಭಯಾನಕ ಜೋಡಿಯಾಗಿ ಮೊಹಮದ್ ಶಮಿ ಹಾಗೂ ಶೆಲ್ಡನ್ ಕಾಟ್ರೆಲ್ ಮಿಂಚುತ್ತಿದ್ದಾರೆ. ಇಡೀ ಟೂರ್ನಿಯಲ್ಲಿ ಪವರ್‌ಪ್ಲೇನಲ್ಲಿ ಈ ಇಬ್ಬರು ಆಟಗಾರರ ಬೌಲಿಂಗ್ ಪ್ರದರ್ಶನ ಅತ್ಯುನ್ನತ ಮಟ್ಟದಲ್ಲಿದೆ.

15ನೇ ಓವರ್‌ವರೆಗೆ ಟೂರ್ನಿಯಲ್ಲೇ ಶ್ರೇಷ್ಠ
ಬೌಲಿಂಗ್ ವಿಭಾಗದಲ್ಲಿ ಕ್ರಿಕೆಟ್ ವಿಶ್ಲೇಷಣಾ ವೆಬ್‌ಸೈಟ್ 'ಕ್ರಿಕ್‌ವಿಜ್' ಪ್ರಕಾರ 15 ಓವರ್‌ಗಳವರೆಗೆ ಉಳಿದ 8 ತಂಡಗಳಿಗಿಂತಲೂ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪ್ರದರ್ಶನ ಶ್ರೇಷ್ಠವಾಗಿದೆ. ಆದರೆ ಆ ಬಳಿಕ ಈ ಪ್ರದರ್ಶನವನ್ನು ಕಾಪಾಡಿಕೊಳ್ಳುವಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿಫಲವಾಗುತ್ತಿದೆ. ಈವರೆಗೆ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿರುವ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಕೇವಲ ಒಂದು ಪಂದ್ಯವನ್ನು ಮಾತ್ರವೇ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಡೆತ್ ಓವರ್‌ನಲ್ಲಿ ಕಿಂಗ್ಸ್ ಸಂಪೂರ್ಣ ವಿಫಲ
ಯಸ್, ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲವೆನ್ ಪಂಜಾಬ್‌ಗೆ ಮುಳ್ಳಗುತ್ತಿರುವುದೇ ಡೆತ್ ಓವರ್‌ಗಳು. ಪಂದ್ಯದ ಅಂತಿಮ ಹಂತದವರೆಗೂ ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಕಿಂಗ್ಸ್ ಬೌಲರ್‌ಗಳು ಬಳಿಕ ಎದುರಾಳಿ ತಂಡಕ್ಕೆ ಭಾರೀ ಪ್ರಮಾಣದಲ್ಲಿ ರನ್ ಬಿಟ್ಟುಕೊಡುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಕೂಡ ಇದೇ ಸಮಸ್ಯೆಯನ್ನು ಎದುರಿಸಿಕೊಂಡು ಬಂದಿದೆ ಹಾಗೂ ಈ ಬಾರಿಯೂ ಅದನ್ನು ಮುಂದುವರಿಸಿದೆ. ಆದರೆ ಕಿಂಗ್ಸ್ ಇಲವೆನ್ ಪಂಜಾಬ್ ಈ ಬಾರಿ ಆರ್‌ಸಿಬಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿದೆ.

ರನ್ ಹೊಳೆ ಹರಿಸಿದ ಬೌಲರ್‌ಗಳು
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಜೋರ್ಡನ್ ಅಂತಿಮ ಓವರ್‌ನಲ್ಲಿ 30 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಪಂದ್ಯ ಟೈ ಆಗಿ ಸೂಪರ್ ಓವರ್‌ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಸೋಲು ಕಂಡಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಾಟ್ರೆಲ್ 30 ರನ್‌ಗಳನ್ನು ರಾಹುಲ್ ತಿವಾಟಿಯಾಗೆ ನೀಡಿ ಪಂದ್ಯದ ಫಲಿತಾಂಶ ಬದಲಾಗಲು ಕಾರಣರಾದರು. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಇದು ಮುಂದುವರಿದಿತ್ತು. ಜಿಮ್ಮಿ ನೀಶಮ್ ಎಸೆದ 16ನೇ ಹಾಗೂ 18ನೇ ಓವರ್‌ನಲ್ಲಿ 22 ಹಾಗೂ 18 ರನ್ ಬಿಟ್ಟುಕೊಟ್ಟಿದ್ದರು. ಕೃಷ್ಣಪ್ಪ ಗೌತಮ್ ಎಸೆದ ಅಂತಿಮ ಓವರ್‌ನಲ್ಲಿ 25 ರನ್ ನೀಡಿದ್ದರು. ಡೆತ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಒಂದು ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತು.

ಕೋಚ್ ಅನಿಲ್ ಕುಂಬ್ಳೆಗೆ ಸವಾಲು
ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಮುಂದೆ ಈಗ ಈ ದೊಡ್ಡ ಸವಾಲಿದೆ. ತಂಡದಲ್ಲಿರುವ ಅತ್ಯುತ್ತಮ ಬೌಲರ್‌ಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟತೆಯನ್ನು ಹೊಂದಬೇಕಾಗಿದೆ. ಇಲ್ಲವಾದಲ್ಲಿ ಬೌಲರ್‌ಗಳ ಅಂತಿಮ ಹಂತದ ಎಡವಟ್ಟಿಗೆ ಪಂದ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಮುಂದುವರಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications