
ಐಪಿಎಲ್ 2020ಯ ಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಮುಂಬೈ ಇಂಡಿಯನ್ಸ್ ಆರನೇ ಬಾರಿಗೆ ಫೈನಲ್ ಪ್ರವೇಶ ಪಡೆದು ಐದನೇ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದರೆ ಡೆಲ್ಲಿ 13 ವರ್ಷಗಳ ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದೆ.
ಈ ಎರಡು ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 27 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಮುಂಬೈ 15 ಬಾರಿ ಗೆದ್ದು ಮುನ್ನಡೆಯಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ ಗೆದ್ದಿದೆ. ಈ ಟೂರ್ನಿಯಲ್ಲಿ ಈವರೆಗೆ ಮೂರು ಬಾರಿ ಡೆಲ್ಲಿ ಮುಂಬೈ ತಂಡಗಳು ಮುಖಾಮುಖಿಯಾಗಿದ್ದು ಮೂರು ಪಂದ್ಯದಲ್ಲೂ ಮುಂಬೈ ಗೆಲುವು ಸಾಧಿಸಿದೆ.
ಇನ್ನು ಪ್ಲೇಆಫ್‌ನ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿತ್ತು. ಆಗ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗತಿತ 20 ಓವರ್‌ಗಳಲ್ಲಿ ಭರ್ಜರಿ 200 ರನ್‌ಗಳನ್ನು ಕಲೆಹಾಕಿತ್ತು. ಆದರೆ ಇದನ್ನು ಬೆನ್ನಟ್ಟಿದ ಡೆಲ್ಲಿ 143 ರನ್ ಗಳಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಮೂಲಕ ಮುಂಬೈ 57 ರನ್‌ಗಳ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.
ಕಳೆದ ಐದು ಪಂದ್ಯಗಳ ಫಲಿತಾಂಶದಲ್ಲಿ ಮುಂಬೈ ಇಂಡಿಯನ್ಸ್ ಮುನ್ನಡೆಯನ್ನು ಪಡೆದುಕೊಂಡಿದೆ. ಸಣ್ಣ ಕುಸಿತವನ್ನು ಕಂಡ ಮುಂಬೈ ಮತ್ತೊಮ್ಮೆ ಗೆಲುವಿನ ಲಯಕ್ಕೆ ಶೀಘ್ರವಾಗಿ ಮರಳಿತು. ಐದು ಪಂದ್ಯಗಳಲ್ಲಿ ಮುಂಬೈ ಮೂರು ಗೆಲುವು ಸಾಧಿಸಿ ಎರಡು ಸೋಲು ಕಂಡಿದ್ದರೆ ಡೆಲ್ಲಿ ತಂಡ ಎರಡು ಗೆಲುವು ಹಾಗೂ ಮೂರು ಸೋಲು ಅನುಭವಿಸಿದೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳ ಪ್ಲೇಆಫ್ ರಿಪೋರ್ಟ್ ಕಾರ್ಡ್‌ನತ್ತ ಗಮನ ನೀಡಿದರೆ ಇಲ್ಲೂ ಮುಂಬೈಗೆ ದೊಡ್ಡ ಮುನ್ನಡೆ ಪಡೆದಿರುವುದು ಸ್ಪಷ್ಟವಾಗುತ್ತದೆ. ಮುಂಬೈ ಈವರೆಗೆ 17 ಪ್ಲೇ ಆಫ್ ಪಂದ್ಯಗಳಲ್ಲಿ ಆಡಿದ್ದು 11 ಗೆಲುವು ಹಾಗೂ 6 ಸೋಲು ಕಂಡಿದೆ. ಡೆಲ್ಲಿ 8 ಪ್ಲೇಆಫ್ ಪಂದ್ಯಗಳಲ್ಲಿ ಆಡಿದ್ದು ಇದರಲ್ಲಿ 2 ಗೆಲುವಷ್ಟೇ ಸಾಧ್ಯವಾಗಿದೆ. ಉಳಿದ ಆರು ಪಂದ್ಯಗಳಲ್ಲಿ ಸೋಲು ಕಂಡಿದೆ.