"ನನ್ನ ರೀತಿಯಲ್ಲೇ ಬ್ಯಾಟ್ ಬೀಸಿದ್ದೀರಿ" ಎಂದು ಕನ್ನಡಿಗನನ್ನು ಪ್ರಶಂಸಿಸಿದ ಸೆಹ್ವಾಗ್

ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮೈದಾನಕ್ಕಿಳಿದರೆಂದರೆ ಅಲ್ಲಿ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸಾಮಾನ್ಯ. ನಿವೃತ್ತಿಯ ನಂತರ ಸೆಹ್ವಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಈಗ ತಮ್ಮ ಭಿನ್ನ ಟ್ವೀಟ್‌ಗಳ ಮೂಲಕ ಹಾಗೂ ವಿಶ್ಲೇಷಣೆಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಸೆಹ್ವಾಗ್. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯವನ್ನು ವೀಕ್ಷಿಸಿದ ಬಳಿಕ ವಿರೂ ಓರ್ವ ಆಟಗಾರನನ್ನು ಮನಸಾರೆ ಹೊಗಳಿದ್ದಾರೆ.
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವಿಭಿನ್ನವಾಗಿ ವಿಶ್ಲೇಷಣೆ ಮಾಡುವ ಸೆಹ್ವಾಗ್ ಓರ್ವ ಆಟಗಾರನ ಪ್ರದರ್ಶನವನ್ನು ತನ್ನ ಬ್ಯಾಟಿಂಗ್ ಪ್ರದರ್ಶನಕ್ಕೆ ಹೋಲಿಸಿಕೊಂಡಿದ್ದಾರೆ. ಆತ ತನ್ನ ರೀತಿಯಲ್ಲೇ ಬ್ಯಾಟ್ ಬೀಸಿದ್ದಾರೆ ಎಂದು ಸೆಹ್ವಾಗ್ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.
ಹಾಗಾದರೆ ಆ ಆಟಗಾರ ಯಾರು? ಸೆಹ್ವಾಗ್ ಹೃದಯ ಗೆದ್ದ ಆ ಕನ್ನಡಿಗ ಆಟಗಾರನ ಪ್ರದರ್ಶನ ಹೇಗಿತ್ತು? ಮುಂದೆ ಓದಿ

ಮ್ಯಾಚ್ ವಿನ್ನಿಂಗ್ ಪ್ರದರ್ಶನ
ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಮನೀಶ್ ಪಾಂಡೆ ಅದ್ಭುತ ಸ್ಪೋಟಕ ಆಟವನ್ನು ಪ್ರದರ್ಶಿಸಿದ್ದು ಮಾತ್ರವಲ್ಲದೆ ಅಜೇಯವಾಗುಳಿದು ತಂಡವನ್ನು ಗೆಲ್ಲಿಸಿದ್ದರು. ಸಹ ಆಟಗಾರ ವಿಜಯ್ ಶಂಕರ್ ಜೊತೆ ಸೇರಿಕೊಂಡು ಪಾಂಡೆ 140 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಮನೀಶ್ ಪಾಂಡೆಯ ಈ ಆಟ ಮಾಜಿ ಸ್ಫೋಟಕ ಆರಂಭಿಕ ಆಟಗಾರನ ಮನ ಗೆಲ್ಲುವಂತೆ ಮಾಡಿದೆ.

'ನನ್ನಂತೆಯೇ ಆಡಿದ್ದೀರಿ ಪಾಂಡೇಜಿ'
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಹ್ವಾಗ್ "ನಿನ್ನೆ ಹೈದರಾಬಾದ್ ರಾಜಸ್ಥಾನ್ ತಂಡವನ್ನು ತನ್ನ ತಾಳಕ್ಕೆ ತಕ್ಕನಾಗಿ ಕುಣಿಸಿತ್ತು. ಹೈದರಾಬಾದ್ ತಂಡದ ಕೈಗೊಂಬೆಯಂತಾಗಿತ್ತು ರಾಜಸ್ಥಾನ್. ಪಾಂಡೆಯವರು ನನ್ನಂತೆಯೇ ಆಡಿ ರಾಜಸ್ಥಾನ್ ತಂಡವನ್ನು ಧ್ವಂಸಮಾಡಿದರು" ಎಂದು ಸೆಹ್ವಾಗ್ ವಿವರಿಸಿದ್ದಾರೆ.

ಭಿನ್ನ ರೀತಿಯಲ್ಲಿ ಸೆಹ್ವಾಗ್ ವಿಶ್ಲೇಷಣೆ
ಈ ಬಾರಿಯ ಐಪಿಎಲ್‌ನಲ್ಲಿ ಆಟಗಾರರು ಅಂಗಳದಲ್ಲಿ ಎಷ್ಟು ಮನರಂಜಿಸುತ್ತಿದ್ದಾರೋ ಅಷ್ಟೇ ಮನರಂಜನೆಯನ್ನು ವೀರೇಂದ್ರ ಸೆಹ್ವಾಗ್ ತನ್ನ ವಿಭಿನ್ನ ವಿಶ್ಲೇಷಣೆಗಳ ಮೂಲಕ ನೀಡುತ್ತಿದ್ದಾರೆ. ನಿತ್ಯವೂ ಭಿನ್ನ ವೇಶಗಳಲ್ಲಿ ಕಾಣಿಸಿಕೊಳ್ಳುವ ವೀರೂ ತಮ್ಮ ಹಾಸ್ಯಭರಿತ ಶೈಲಿಯಲ್ಲಿ ಹಿಂದಿನ ದಿನದ ಪಂದ್ಯದ ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಇದು ಲಕ್ಷಾಂತರ ವೀಕ್ಷಕರನ್ನು ಸೆಳೆಯುತ್ತಿದೆ.

ಸಂಕಷ್ಟದ ಸಂದರ್ಭದಲ್ಲಿ ಪಾಂಡೆ ಸಾಹಸ
ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಮನೀಶ್ ಪಾಂಡೆ ಇನ್ನಿಂಗ್ಸ್ ಸಾಕಷ್ಟು ವಿಶೇಷವೆನಿಸಲು ಕಾರಣವೂ ಇದೆ. ಮನೀಶ್ ಪಾಂಡೆ ಕ್ರೀಸ್‌ಗೆ ಇಳಿದಾಗ ನಾಯಕ ವಾರ್ನರ್ 4 ರನ್‌ಗೆ ವಿಕೆಟ್ ಕಳೆದು ಕೊಂಡಿದ್ದರೆ ಕೆಲವೇ ಕ್ಷಣಗಳಲ್ಲಿ ಇನ್ನೋರ್ವ ಆರಂಭಿಕ ಆಟಗಾರ ಬೈರ್‌ಸ್ಟೋವ್ ಕೂಡ ಶೀಘ್ರದಲ್ಲಿ ವಿಕೆಟ್ ಒಪ್ಪಿಸಿದ್ದರು. 16 ರನ್‌ಗೆ ಹೈದರಾಬಾದ್ 2 ವಿಕೆಟ್ ಕಳೆದುಕೊಂಡಿತ್ತು. ಇದೇ ಅಂಗಳದಲ್ಲಿ ಕೆಕೆಆರ್ ಪರದಾಡಿದ ರೀತಿಯೂ ಎಲ್ಲರ ಕಣ್ಣ ಮುಂದಿತ್ತು. ಆದರೆ ಮನೀಶ್ ಪಾಂಡೆ ಎಲ್ಲೂ ಎಡವಟ್ಟು ಮಾಡಿಕೊಳ್ಳದೆ ಸ್ಪೋಟಕ ಆಟದ ಮೂಲಕ ಮುನ್ನುಗ್ಗಲು ಆರಂಭಿಸಿದ್ದರು. 8 ಸಿಕ್ಸರ್ 4 ಬೌಂಡರಿಗಳ ಸಹಾಯದಿಂದ 83 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಭರ್ಜರಿ ಗೆಲುವಿಗೆ ಕಾರಣರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications