
ಐಪಿಎಲ್ ಟೂರ್ನಿಯ ಶನಿವಾರದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. ಆದರೆ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಡುವ ಬಳಗದ ಆಯ್ಕೆಯ ಬಗ್ಗೆ ದಿಗ್ಗಜ ಕ್ರಿಕೆಟಿಗ ಬ್ರ್ಯಾನ್ ಲಾರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಲೇ ಬೇಕಿತ್ತು. ಜೊತೆಗೆ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಅವರನ್ನು ಹೊರಗಿಟ್ಟು ಇಂಗ್ಲೆಂಡ್‌ನ ಆಲ್‌ರೌಂಡರ್ ಕ್ರಿಸ್ ಜೋರ್ಡನ್ ಅವರನ್ನು ಸೇರ್ಪಡೆಗೊಳಿಸಬೇಕಿತ್ತು ಎಂದು ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಕ್ರಿಸ್ ಗೇಲ್ ತಂಡದಲ್ಲಿ ಇಲ್ಲದ ಬಗ್ಗೆ ನಾನು ನಿಜಕ್ಕೂ ಅಸಮಾಧಾನಗೊಂಡಿದ್ದೇನೆ. ಕ್ರಿಸ್ ಗೇಲ್ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಬಲ್ಲ ಆಟಗಾರ... ಇನ್ನು ಕ್ರಿಸ್ ಜೋರ್ಡನ್ ಈವರೆಗಿನ ಐಪಿಎಲ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡದಿರಬಹುದು. ಆದರೆ ಆತ ಕೆಟ್ಟ ಆಟಗಾರ ಎಂದು ನಾನು ಹೇಳಲಾರೆ. ಆದರೆ ಕ್ರಿಸ್ ಗೇಲ್ ಜೊತೆಯಲ್ಲಿ ತಂಡದೊಳಗೆ ಈತನೂ ಸೇರಿಕೊಳ್ಳುವದರಿಂದ ಬ್ಯಾಟಿಂಗ್‌ನಲ್ಲಿ ವಿಶೇಷವಾದದ್ದನ್ನು ಸಾಧಿಸಲು ಸಾಧ್ಯವಿದೆ" ಎಂದು ಲಾರಾ ಪಂದ್ಯದ ಆರಂಭಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ನ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಅವಕಾಶವನ್ನು ಪಡೆದ ಬಗ್ಗೆ ಲಾರ ಪ್ರತಿಕ್ರಿಯಿಸುತ್ತಾ, "ಕಿಂಗ್ಸ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆಯಿದೆ ಎಂದು ನನಗೆ ಅನಿಸುತ್ತಿಲ್ಲ. ಶೆಲ್ಡನ್ ಕಾಟ್ರೆಲ್ ಅವರ ಸ್ಥಾನದಲ್ಲಿ ಕ್ರಿಸ್ ಗೇಲ್‌ಗೆ ಅವಕಾಶವನ್ನು ನೀಡಬೇಕು. ಹಾಗೂ ಭಾರತೀಯ ಬೌಲರ್‌ಗಳ ಮೇಲೆ ತಂಡ ನಂಬಿಕೆಯನ್ನು ಇಡಬೇಕು ಎಂದು ಲಾರಾ ಹೇಳಿದ್ದಾರೆ.
"ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಒಳಗೊಂಡಿರುವ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಒಮ್ಮೆ ಯೋಚಿಸಿ ನೋಡಿ. ಇದರ ಕೇಳ ಕ್ರಮಾಂಕದಲ್ಲಿ ಅವರು ಯಾವ ರೀತಿಯಲ್ಲೂ ಆಯ್ಕೆ ಮಾಡಿಕೊಳ್ಳಬಹುದು. ನಿಜ ಕಾಟ್ರೆಲ್ ಸ್ಥಾನಕ್ಕೆ ಜಾರ್ಡನ್ ತರಬೇಕು ಹಾಗೂ ಭಾರತೀಯ ಬೌಲಿಂಗ್ ಲೈನ್‌ಅಪ್ ಬಗ್ಗೆ ನಂಬಿಕೆಯನ್ನು ಇಡಬೇಕು ಎಂದು ಲಾರಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.