
ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 22) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 4ನೇ ಪಂದ್ಯ ಸಿಕ್ಸ್ ಸುರಿಮಳೆಗೆ ಸಾಕ್ಷಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸಾಲು ಸಾಲು ಫೋರ್, ಸಿಕ್ಸರ್‌ಗಳಿಗಾಗಿ ಗಮನ ಸೆಳೆದಿದೆ.
ಇದೇ ಪಂದ್ಯದಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡುವ ಆರ್‌ಆರ್ ಫ್ರಾಂಚೈಸಿ ಬೌಲರ್ ಜೋಫ್ರಾ ಆರ್ಚರ್ ಅಂತಿಮ ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಬಾರಿಸಿ ಕ್ರಿಕೆಟ್ ಪ್ರಿಯರ ಚಿತ್ತ ತನ್ನತ್ತ ಹರಿಸಿಕೊಂಡಿದ್ದಾರೆ. ಡೆತ್ ಓವರ್‌ನಲ್ಲಿ ಆರ್ಚರ್ ಲುಂಗಿ ಸಾನಿ ಎನ್‌ಗಿಡಿ ಎಸೆತಗಳನ್ನು ಸಿಕ್ಸ್ ಲೈನ್‌ಗೆ ಅಟ್ಟಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್‌ನಿಂದ ಬಿರುಸಿನ ಬ್ಯಾಟಿಂಗ್ ಕಾಣಸಿಕ್ಕಿತು. ಸ್ಟೀವ್ ಸ್ಮಿತ್ 69 (47 ಎಸೆತ, 4 ಫೋರ್, 4 ಸಿಕ್ಸರ್), ಸಂಜು ಸ್ಯಾಮ್ಸನ್ 74 (32 ಎಸೆತ, 1 ಫೋರ್, 9 ಸಿಕ್ಸರ್), ಜೋಫ್ರಾ ಆರ್ಚರ್ ಅಜೇಯ 27 (8 ಎಸೆತ, 4 ಸಿಕ್ಸರ್) ರನ್ ಬಾರಿಸಿದರು.
ರಾಜಸ್ಥಾನ್ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 216 ರನ್ ಬಾರಿಸಿತು. ಆರ್ಆರ್ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 17 ಸಿಕ್ಸರ್‌ಗಳು ಬಂದಿದ್ದವು. ಭರ್ಜರಿ ಸಿಕ್ಸರ್‌ಗಳ ಪರಿಣಾಮವೇ ಆರ್‌ಆರ್ ತಂಡ ಟೂರ್ನಿಯಲ್ಲಿ ಅತ್ಯಧಿಕ ಟೋಟಲ್ (216 ರನ್) ದಾಖಲೆ ನಿರ್ಮಿಸಿದೆ. ಈ ಬಾರಿ ಈಗಿನವರೆಗೆ ಇದೇ ಅತ್ಯಧಿಕ ಒಟ್ಟು ಮೊತ್ತವಾಗಿದೆ. ಇದು ಬಿಟ್ಟರೆ ಸಿಎಸ್‌ಕೆ 166, ಆರ್‌ಸಿಬಿ 163 ಅತ್ಯಧಿಕ ಟೋಟಲ್ ಆಗಿದೆ.