
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೂ ಬೇಗನೆ ವಿಕೆಟ್ ಕಳೆದುಕೊಳ್ಳುವ ಮೂಲಕ ಮತ್ತೊಂದು ವೈಫಲ್ಯವನ್ನು ಅನುಭವಿಸಿದರು. ಈ ಬಗ್ಗೆ ಮಾತನಾಡಿದ ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಝಾ ಮ್ಯಾಕ್ಸ್‌ವೆಲ್ ಆಟದಿಂದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಂತಸಗೊಂಡಿಲ್ಲ ಎಂಬುದು ಸ್ಪಷ್ಟ ಎಂದಿದ್ದಾರೆ.
ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡ ಸೋಲನ್ನು ಅನುಭವಿಸುವ ಮೂಲಕ ಟೂರ್ನಿಯಲ್ಲಿ ಐದನೇ ಸೋಲು ಕಂಡಿತು. ಸ್ವತಃ ನಾಯಕ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಬಾರದಿರುವುದು ಆಗ್ರ ಕ್ರಮಾಂಕದ ಆಟಗಾರರ ಮೇಲೆ ಒತ್ತಡ ಬೀಳುತ್ತಿದೆ. ಹೀಗಾಗಿ ಅವರ ಬೇಗನೆ ವಿಕೆಟ್‌ಗಳು ಉರುಳಲು ಕಾರಣವಾಗುತ್ತಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ. ಇದೇ ಮಾತನ್ನು ಓಝಾ ಪುನರುಚ್ಚರಿಸಿದ್ದಾರೆ.
"ಹಿಂದಿನ ಪಂದ್ಯ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವ ರೀತಿಯಲ್ಲಿ ಅರಾಮದಾಯಕವಾಗಿ ಕಂಡುಬರಲಿಲ್ಲ. ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿದ ರೀತಿ ಅಮೋಘವಾಗಿತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರು ಕಳೆದುಹೋಗಿದ್ದರು" ಎಂದು ಪ್ರಗ್ಯಾನ್ ಓಝಾ ಅಭಿಪ್ರಾಯಪಟ್ಟಿದ್ದಾರೆ.
"ಮಧ್ಯಮ ಕ್ರಮಾಂಕದಲ್ಲಿನ ಕೆಟ್ಟ ಪ್ರದರ್ಶನ ಕೆಎಲ್ ರಾಹುಲ್‌ಗೆ ಒತ್ತಡವನ್ನು ನೀಡುತ್ತಿದೆ. ಮಯಾಂಕ್ ಹಾಗೂ ತಾನು ಉತ್ತಮ ಆಟವನ್ನು ಪ್ರದರ್ಶಿಸದಿದ್ದರೆ ಪಂದ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರಾಹುಲ್‌ಗೆ ಗೊತ್ತಿದೆ. ಮದ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರಾಹುಲ್ ಮೇಲಿನ ಹೊರೆಯನ್ನು ಹೊರಲು ವಿಫಲರಾಗುತ್ತಿದ್ದಾರೆ" ಎಂದು ಪ್ರಗ್ಯಾನ್ ಓಝಾ ಹೇಳಿಕೆಯನ್ನು ನೀಡಿದ್ದಾರೆ.
'ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ "ಕ್ರಿಸ್ ಗೇಲ್ ಅವರನ್ನು ಕಣಕ್ಕಿಳಿಸಲು ಬಯಸಿದ್ದೆವು. ಆದರೆ ಅವರು ಫುಡ್‌ಫಾಯ್ಸನ್‌ಗೆ ಒಳಗಾಗಿದ್ದರಿಂದ ಬಳಲಿದ್ದಾರೆ" ಎಂದಿದ್ದರು. ಕೋಚ್ ನಿಡಿದ ಈ ಹೇಳಿಕೆಯನ್ನು ಗಮನಿಸಿದರೆ ನಮಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮ್ಯಾಕ್ಸ್‌ವೆಲ್ ಪ್ರದರ್ಶನದಿಂದ ಸಂತಸಗೊಂಡಿಲ್ಲ ಎಂಬುದು ಅರಿವಾಗುತ್ತದೆ. ಮುಂದಿನ ಪಂದ್ಯದಲ್ಲಿ ಗೇಲ್ ತಂಡಕ್ಕೆ ಸೇರಿಕೊಳ್ಳಲಿದ್ದು ಮ್ಯಾಕ್ಸ್‌ವೆಲ್ ಹೊರಗುಳಿಯಲಿದ್ದಾರೆ ಎಂಬುದು ಈ ಮಾತಿನಿಂದ ಸ್ಪಷ್ಟವಾಗುತ್ತದೆ' ಎಂದು ಓಝಾ ಹೇಳಿಕೆಯನ್ನು ನೀಡಿದ್ದಾರೆ.