
ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 10) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 24ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 2 ರನ್ ರೋಚಕ ಜಯ ಗಳಿಸಿದೆ. ಕೆಎಲ್ ರಾಹುಲ್ ನಾಯಕನ ಆಟ ನೀಡಿದರಾದರೂ ಪಂಜಾಬ್ ಗೆಲುವಿನ ದಡ ಸೇರಲಿಲ್ಲ. ಇದು ಪಂಜಾಬ್‌ಗೆ ಟೂರ್ನಿಯಲ್ಲಿ ಲಭಿಸುತ್ತಿರುವ 6ನೇ ಸೋಲು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್, ಶುಬ್‌ಮನ್ ಗಿಲ್ 57 (47 ಎಸೆತ), ಇಯಾನ್ ಮಾರ್ಗನ್ 24, ದಿನೇಶ್ ಕಾರ್ತಿಕ್ 58 (29), ಆ್ಯಂಡ್ರೆ ರಸೆಲ್ 5, ಪ್ಯಾಟ್ ಕಮಿನ್ಸ್ 5 ರನ್ ಸೇರ್ಪಡೆಯೊಂದಿಗೆ 20 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಬಾರಿಸಿತು.
ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ಕೆಎಲ್ ರಾಹುಲ್ 74 (58), ಮಾಯಂಕ್ ಅಗರ್ವಾಲ್ 56 (39), ನಿಕೋಲಸ್ ಪೂರನ್ 16, ಗ್ಲೆನ್ ಮ್ಯಾಕ್ಸ್‌ವೆಲ್ 10 ರನ್ ಸೇರಿಸಿ ಗೆಲುವಿಗಾಗಿ ಯತ್ನಿಸಿದರು. ಆದರೆ ಪಂಜಾಬ್ 20 ಓವರ್‌ಗೆ 5 ವಿಕೆಟ್ ಕಳೆದು 162 ರನ್ ಗಳಿಸಿ ಶರಣಾಯಿತು.
ಕೋಲ್ಕತ್ತಾ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ರವಿ ಬಿಶ್ನೋಯ್ ತಲಾ 1 ವಿಕೆಟ್ ಪಡೆದರು. ಪಂಜಾಬ್ ಇನ್ನಿಂಗ್ಸ್‌ನಲ್ಲಿ ಕೆಕೆಆರ್‌ನ ಪ್ರಸಿದ್ಧ್ ಕೃಷ್ಣ 29 ರನ್‌ಗೆ 3 ವಿಕೆಟ್, ಸುನಿಲ್ ನೈನ್ 28 ರನ್‌ಗೆ 2 ವಿಕೆಟ್ ಮುರಿದು ಗಮನ ಸೆಳೆದರು.