
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 69 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಹೈದರಾಬಾದ್ ತಂಡ ಅರ್ಹ ಗೆಲುವನ್ನು ಸಂಪಾದಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿರು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ದಾಖಲೆಯ ಶತಕದ ಜೊತೆಯಾಟವನ್ನು ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 160 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಜಾನಿ ಬೈರ್‌ಸ್ಟೋವ್ 97 ರನ್‌ಗಳಿಸಿ ಶತಕದ ಅಂಚಿನಲ್ಲಿ ಎಡವಿದರೆ ಡೇವಿಡ್ ವಾರ್ನರನ್ ತಮ್ಮ 50ನೇ ಅರ್ಧ ಶತಕವನ್ನು ಪೂರೈಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲರ್‌ಗಳ ನೀರಸ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರಿದ ಪರಿಣಾಮ ಸನ್‌ರೈಸರ್ಸ್ 202 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಬ್ಯಾಟಿಂಗ್‌ನಲ್ಲೂ ನಿರಾಸೆಯನ್ನು ಅನುಭವಿಸಿತು. ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಲು ವಿಫಲರಾದರು. ಸಿಮ್ರಾನ್ ಸಿಂಗ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದರು.
ಮಧ್ಯಮ ಕ್ರಮಾಂಕದಲ್ಲಿ ಕಣ್ಕಕಿಳಿದ ನಿಕೋಲಸ್ ಪೂರನ್ ಮಾತ್ರ ಏಕಾಂಗಿ ಪ್ರದರ್ಶನವನ್ನು ನೀಡಿದರು. ಸ್ಪೋಟಕ ಅರ್ಧ ಶತಕವನ್ನು ದಾಖಲಿಸಿದ ಪೂರನ್ 37 ಎಸೆತಗಳಲ್ಲಿ 77 ರನ್ ಬಾರಿಸಿ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಪೂರನ್‌ಗೆ ಸರಿಯಾದ ಬೆಂಬಲ ಸಿಗದೆ ಏಕಾಂಗಿಯಾದರು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರಿಯಿತು. ಅಂತಿಮವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 132 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು.
ಇಂದಿನ ಪಂದ್ಯದ ಗೆಲುವಿನ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. 6 ಪಂದ್ಯಗಳನ್ನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 3 ಗೆಲುವು ಹಾಗೂ 3 ಸೋಲು ಕಂಡು 6 ಅಂಕ ಸಂಪಾದಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಟೂರ್ನಿಯಲ್ಲಿ 5ನೇ ಸೋಲುಕಂಡು ಕೊನೆಯ ಸ್ಥಾನದಲ್ಲೇ ಭದ್ರವಾಗಿದೆ.