ಐಪಿಎಲ್ transfer ಆಗಬಲ್ಲ ಸಂಭಾವ್ಯ 5 ವಿದೇಶಿ ಆಟಗಾರರು ಯಾರು?
ಐಪಿಎಲ್ 2020ರಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಕೆಲ ಹಿರಿಯ ಆಟಗಾರರಿಗೆ ಕಣಕ್ಕಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ವಿದೇಶಿ ಆಟಗಾರರ ಪ್ರದರ್ಶನ ಸಾಧಾರಣವಾಗಿದೆ. ಮ್ಯಾಕ್ಸ್ ವೆಲ್, ನರೇನ್ ತಕ್ಕಮಟ್ಟಿನ ಪ್ರದರ್ಶನ ನೀಡಿಲ್ಲ, ಮಿಲ್ಲರ್, ಗೇಲ್ ಅವಕಾಶ ಪಡೆದಿಲ್ಲ. ಹೀಗಾಗಿ ಪ್ರಮುಖವಾಗಿ ವರ್ಗಾವಣೆಯಾಗಬಲ್ಲ 5 ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ
ಐಪಿಎಲ್ ಸೀಸನ್ ಮಧ್ಯದಲ್ಲೇ ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರನ್ನು ತಂಡಗಳ ನಡುವೆ ಟ್ರೇಡ್ ಮಾಡಬಹುದಾಗಿದೆ. ಸದ್ಯಕ್ಕೆ ಯಾವ ತಂಡವೂ ಈ ರೀತಿಯ ಮಿಡ್ ಸೀಸನ್ ಆಟಗಾರರ ವರ್ಗಾವಣೆಗೆ ಸಿದ್ಧವಾಗಿಲ್ಲ. ಸದ್ಯಕ್ಕೆ ನಿಯಮ ಪ್ರಕಾರ 7 ಪಂದ್ಯಗಳ ನಂತರ ಸೌಲಭ್ಯ ಲಭ್ಯವಾಗಲಿದೆ. ಭಾರತ ಐದು ಸ್ಟಾರ್ ಆಟಗಾರರ ವರ್ಗಾವಣೆ ಸಾಧ್ಯತೆ ಬಗ್ಗೆ ಇಲ್ಲಿದೆ ವರದಿ...
ಮಿಡ್ ಸೀಸನ್ ಆಟಗಾರರ ವರ್ಗಾವಣೆ ನಿಮಯಗಳು:
* ಪ್ರಸಕ್ತ ಸೀಸನ್ ನಲ್ಲಿ ಎಲ್ಲಾ 8 ತಂಡಗಳು ಕನಿಷ್ಠ 7 ಪಂದ್ಯಗಳನ್ನಾಡಿರಬೇಕು.
* ವರ್ಗಾವಣೆಗೆ ಒಳಪಡುವ ಆಟಗಾರ 2 ಪಂದ್ಯಕ್ಕಿಂತ ಹೆಚ್ಚು ಪಂದ್ಯವನ್ನಾಡಿರಬಾರದು.
* ಕ್ಯಾಪ್ಡ್ ಹಾಗೂ ಅನ್ ಕ್ಯಾಪ್ಡ್ ಆಟಗಾರರಿಬ್ಬರನ್ನು ಖರೀದಿಸಲು ಅಥವಾ ತಂಡದಿಂದ ತಂಡಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯ.
* ಹೀಗಾಗಿ, ಇನ್ನೂ ಒಂದು ಪಂದ್ಯವಾಡದ ಪವನ್ ದೇಶಪಾಂಡೆಗೂ ಒಂದೇ ನಿಯಮ, ಸಿಕ್ಸರ್ ಕಿಂಗ್ ಗೇಲ್ ಗೂ ಅದೇ ನಿಯಮ.

ಮಿಚೆಲ್ ಸ್ಯಾಂಟ್ನರ್(ಚೆನ್ನೈ ಸೂಪರ್ ಕಿಂಗ್ಸ್)
ನ್ಯೂಜಿಲೆಂಡ್ ತಂಡ ಎಡಗೈ ಸ್ಪಿನ್ನರ್ ಹಾಗೂ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ ಮನ್ಸ್ ಎನಿಸಿಕೊಂಡಿರುವ ಮಿಚೆಲ್ ಸ್ಯಾಂಟ್ನರ್ ಅವರು ವಿದೇಶಿ ಆಟಗಾರರ ಕೋಟಾದಲ್ಲಿ ಚೆನ್ನೈ ತಂಡದ ಆಡುವ ಹನ್ನೊಂದು ಬಳಗದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಶೇನ್ ವಾಟ್ಸನ್, ಫಾಫ್ ಡುಪ್ಲೆಸಿಸ್, ಸ್ಯಾಮ್ ಕರನ್ ಹಾಗೂ ಡ್ವಾಯ್ನೆ ಬ್ರಾವೋ ಅವರ ಸ್ಥಾನ ಖಚಿತವಾಗಿದ್ದು, ಧೋನಿ ಬಹುತೇಕ ಒಂದೇ ತಂಡವನ್ನು ಉಳಿಸಿಕೊಳ್ಳುವ ತಂತ್ರ ಅನುಸರಿಸುತ್ತಾರೆ, ಹೀಗಾಗಿ ಸ್ಯಾಂಟ್ನರ್ ವರ್ಗಾವಣೆಯಾಗಬಹುದು.
ಯಾವ ತಂಡಕ್ಕೆ: ಕಿಂಗ್ಸ್ ಎಲೆವನ್ ಪಂಜಾಬ್
ಪಂಜಾಬ್ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಕ್ಲಿಕ್ ಆಗದ ಕಾರಣ ಆಲ್ ರೌಂಡರ್ ಆಟ ಆಡಲು ಸ್ಯಾಂಟ್ನರ್ ಕರೆತರಬಹುದು. ಬ್ಯಾಟಿಂಗ್ ಗಿಂತ ಬೌಲಿಂಗ್ ನಲ್ಲಿ ವೈವಿಧ್ಯತೆಯನ್ನು ಸ್ಯಾಂಟ್ನರ್ ಒದಗಿಸಬಲ್ಲರು.

ಮಿಚೆಲ್ ಮೆಕ್ ಕ್ಲೆನಘನ್ (ಮುಂಬೈ)
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದ ಮಿಚೆಲ್ ಮೆಕ್ ಕ್ಲೆನಘನ್ ಗೆ ಸ್ಥಾನ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಟ್ರೆಂಟ್ ಬೌಲ್ಟ್ ಅಲ್ಲದೆ ನಾಥನ್ ಕೌಲ್ಟರ್ ನೈಲ್ ಮೊದಲ ಆದ್ಯತೆ ಬೌಲರ್ ಗಳೆನಿಸಿದ್ದಾರೆ. ಅಲ್ಲದೆ ಹೆಚ್ಚುವರಿ ಬೌಲರ್ ಗಳಾಗಿ ಪೊಲ್ಲಾರ್ಡ್ ಇದ್ದಾರೆ.
ಯಾವ ತಂಡಕ್ಕೆ : ಕಿಂಗ್ಸ್ ಎಲೆವನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್
ಐಪಿಎಲ್ 2020ರಲ್ಲಿ ಹೆಚ್ಚು ಕ್ಲಿಕ್ ಆಗದ ವಿಂಡೀಸ್ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಬದಲಿಗೆ ಮಿಚೆಲ್ ಮೆಕ್ ಕ್ಲೆನಘನ್ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಜಯದೇವ್ ಉನದ್ಕತ್ ಕೂಡಾ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ, ಮಿಚೆಲ್ ವರ್ಗಾವಣೆ ಸಾಧ್ಯತೆಯಿದೆ.

ಡೇಲ್ ಸ್ಟೇನ್ (ಆರ್ ಸಿಬಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೆ ಬಂದಿರುವ ಶರವೇಗಿ ಡೇಲ್ ಸ್ಟೇನ್ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಸ್ಟೇನ್ ಬದಲಿಗೆ ಶ್ರೀಲಂಕಾದ ಉದಾನ ಆಯ್ಕೆಗೆ ಅದ್ಯತೆ ಸಿಕ್ಕಿದೆ. ಸ್ಟೇನ್ ವಿಕೆಟ್ ಟೇಕರ್ ಆಗಿ ಪ್ರದರ್ಶನ ನೀಡದಿದ್ದರೆ, ತಂಡದಲ್ಲಿ ಉಳಿಗಾಲವಿಲ್ಲ.
ಯಾವ ತಂಡಕ್ಕೆ: ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ ಎಲೆವನ್ ಪಂಜಾಬ್
ಈ ಎರಡು ತಂಡಗಳು ವಿಕೆಟ್ ತೆಗೆಯುವ ವೇಗಿಗಳ ಹುಡುಕಾಟದಲ್ಲಿವೆ. ಸ್ಟೇನ್ ಅವರ ವೇಗಕ್ಕೆ ಬೆಲೆ ಸಿಗಬಹುಡು. ರಾಜಸ್ಥಾನದಲ್ಲಿ ಜೋಫ್ರಾ ಆರ್ಚರ್ ಗೆ ಸರಿಯಾದ ಸಾಥ್ ನೀಡಬಹುದು. ಓಶಾನೆ ಥಾಮಸ್ ಹಾಗೂ ಆಂಡ್ರ್ಯೂ ಟೈ ಇದ್ದರೂ ಅವಕಾಶ ಸಿಕ್ಕಿಲ್ಲ. ಪಂಜಾಬ್ ತಂಡದಲ್ಲೂ ರನ್ ನಿಯಂತ್ರಣ ಹಾಗೂ ವಿಕೆಟ್ ಪಡೆಯುವ ವಿಶ್ವಾಸ ಹುಟ್ಟಿಸುವ ಬೌಲರ್ ಗಳಿಲ್ಲ.

ಡೇವಿಡ್ ಮಿಲ್ಲರ್ (ರಾಜಸ್ಥಾನ)
ಒಂದು ಕಾಲದಲ್ಲಿ ಬಹುಬೇಡಿಕೆ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದ ಡೇವಿಡ್ ಮಿಲ್ಲರ್ ಈಗ ರಾಜಸ್ಥಾನ ತಂಡದಲ್ಲಿದ್ದರೂ ಅವಕಾಶವಿಲ್ಲ. ಬೆನ್ ಸ್ಟೋಕ್ಸ್ ಬಂದಿರುವುದರಿಂದ ಸ್ಮಿತ್, ಬಟ್ಲರ್, ಆರ್ಚರ್ ಜೊತೆಗೆ ವಿದೇಶಿ ಆಟಗಾರರ ಕೋಟಾದಲ್ಲಿ ಆಯ್ಕೆ ಕಷ್ಟ
ಯಾವ ತಂಡಕ್ಕೆ: ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳಲು ಬಯಸಿದರೆ ಮಿಲ್ಲರ್ ಅವಕಾಶ ಪಡೆಯಬಹುದು. ವಾಟ್ಸನ್, ಡುಪ್ಲೆಸಿಸ್, ಬ್ರಾವೋ, ಕರನ್ ಮೊದಲ ಆಯ್ಕೆಯಾಗಿದ್ದು, ಇವರಿಗೆ ಬದಲಿಯಾಗಿ ಮಿಲ್ಲರ್ ಬಳಸಿಕೊಳ್ಳಬಹುದು.

ಬಿಲ್ಲಿ ಸ್ಟಾನ್ಲೇಕ್(ಹೈದರಾಬಾದ್)
ಆರ್ ಸಿಬಿ ಹಾಗೂ ಹೈದರಾಬಾದ್ ಪರ ಆಡಿರುವ ಬಲಗೈ ವೇಗಿ ಬಿಲ್ಲಿ ಸ್ಟಾನ್ಲೇಕ್ 6 ಪಂದ್ಯಗಳಲ್ಲಿ 7 ವಿಕೆಟ್ ತೆಗೆದುಕೊಂಡಿದ್ದಾರೆ. 25 ವರ್ಷದ ವೇಗಿ ಗಾಯಾಳು ಪಟ್ಟಿಯಲ್ಲಿ ಆಗಾಗ ಕಾಣಿಸಿಕೊಳ್ಳುವುದರಿಂದ ಆಯ್ಕೆಯಾಗಿಲ್ಲ. ವಿದೇಶಿ ಕೋಟಾ ಕೂಡಾ ಭರ್ತಿಯಾಗಿದೆ.
ಯಾವ ತಂಡಕ್ಕೆ : ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್
ವಿದೇಶಿ ವೇಗಿಗೆ ಬದಲಿ ವೇಗಿಗಳಿಲ್ಲದ ಕಾರಣ ಸ್ಟೇನ್ ಬಿಟ್ಟುಕೊಟ್ಟು ಬಿಲ್ಲಿಯನ್ನು ಆರ್ ಸಿಬಿ ಕರೆಸಿಕೊಳ್ಳಬಹುದು. ಪಂಜಾಬ್ ತಂಡ ಶೆಲ್ಡನ್ ಕಾಟ್ರೆಲ್ ಬದಲಿಗೆ ಬಿಲ್ಲಿಗೆ ಮಣೆ ಹಾಕಬಹುದು. 150 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚೆಂಡು ಎಸೆಯುವ ಬಿಲ್ಲಿಗೆ ಅವಕಾಶ ಸಿಗುವುದೇ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications