ಐಪಿಎಲ್ 2020: ರೈನಾ ಹೆಸರಲ್ಲಿದ್ದ ಪ್ರಮುಖ ಐಪಿಎಲ್ ದಾಖಲೆಯನ್ನು ತನ್ನ ಹೆಸರಿಗೆ ಬರೆಯಲು ಧೋನಿ ಸಜ್ಜು

ಇವತ್ತು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಐಪಿಎಲ್‌ನ ಪ್ರಮುಖ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಲು ಸಜ್ಜಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಟಾಸ್‌ಗಾಗಿ ಕಣಕ್ಕಿಳಿಯುತ್ತಿದ್ದಂತೆಯೇ ಧೋನಿ ಹೆಸರಿಗೆ ಈ ಐಪಿಎಲ್ ದಾಖಲೆ ಬರೆಯಲ್ಪಡಲಿದೆ.
ಸಿಎಸ್‌ಕೆ ನಾಯಕ ಎಂಎಸ್ ಧೋನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಕಣಕ್ಕಿಳಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಈ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿತ್ತು. ಸುರೇಶ್ ರೈನಾ ಈ ಬಾರಿಯ ಐಪಿಎಲ್‌ನಿಂದ ಹಿಂದಕ್ಕೆ ಸರಿದ ಕಾರಣ ಧೋನಿ ಈ ದಾಖಲೆಯನ್ನು ಸುಲಭವಾಗಿ ತಮ್ಮ ಹೆಸರಿಗೆ ಬರೆಯಲು ಸಾಧ್ಯವಾಗಿದೆ.
ಸುರೇಶ್ ರೈನಾ 193 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಚೆನ್ನೈ ನಾಯಕ ಎಂಎಸ್ ಧೋನಿ ಆಡುವ ಮೂಲಕ ಈ ದಾಖಲೆಯನ್ನು ಸರಿದೂಗಿಸಿದ್ದರು. ಇಂದಿನ ಪಂದ್ಯದಲ್ಲಿ ಧೋನಿ ಈ ದಾಖಲೆಯನ್ನು ಮುರಿಯಲಿದ್ದಾರೆ.
ಸುರೇಶ್ ರೈನಾ ಈ ಬಾರಿ ವೈಯಕ್ತಿಕ ಕಾರಣವನ್ನು ನೀಡಿ ಐಪಿಎಲ್ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದಾರೆ. ಹೀಗಾಗಿ ಈ ದಾಖಲೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕನಿಷ್ಠ ಈ ಆವೃತ್ತಿಯ ಪ್ಲೇ ಆಪ್‌ವರೆಗೆ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.
ಈ ದಾಖಲೆಯ ಪಟ್ಟಿಯಲ್ಲಿ ಧೋನಿಯ ಸನಿಹದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಹಂತಕ್ಕೆ ಏರದೆ ಮುಂಬೈ ತಂಡ ಈ ಸಾಧನೆ ಮಾಡಿದಲ್ಲಿ ಸದ್ಯ 192 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications