ಐಪಿಎಲ್ 2020: ಮುಂಬೈ ಇಂಡಿಯನ್ಸ್‌ಗೆ ಸುಲಭ ತುತ್ತಾದ ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸುಲಭವಾಗಿ ಗೆದ್ದು ಬೀಗಿದೆ. ಭರ್ಜರಿ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್ ಬಳಿಕ ಬೌಲಿಂಗ್‌ನಲ್ಲೂ ಬಿಗುವಿನ ದಾಳಿ ನಡೆಸಿ ರಾಜಸ್ಥಾನ್ ರಾಯಲ್ಸ್ ತಂಡದ ದಾಂಡಿಗರಿಗೆ ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ 57 ರನ್‌ಗಳ ಭರ್ಜರಿ ಗೆಲುವನ್ನು ಮುಂಬೈ ಇಂಡಿಯನ್ಸ್ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 193/4 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ ಭರ್ಜರಿ ಆಟ ಮುಂಬೈ ಇನ್ನಿಂಗ್ಸ್‌ಗೆ ರಂಗು ನೀಡಿತ್ತು. 47 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 79 ರನ್‌ಗಳಿಸಿ ಅಜೇಯವಾಗಿ ಉಳಿದರು. ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ಮುಂಬೈ ಬೌಲರ್‌ಗಳ ದಾಳಿಗೆ ಪ್ರತ್ಯುತ್ತರ ನೀಡಲು ವಿಫಲರಾದ ರಾಜಸ್ಥಾನ್ ದಾಂಡಿಗರು ಒಬ್ಬೊಬ್ಬರಾಗಿ ವಿಕೆಟ್ ಒಪ್ಪಿಸಲು ಆರಂಭಿಸಿದ್ದರು.
ಎರಡನೇ ಎಸೆತಕ್ಕೆ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ನಾಯಕ ಸ್ಟೀವ್ ಸ್ಮಿತ್ 6 ರನ್‌ಗಳಿಸಿ ಹೊರನಡೆದರೆ, ಸಂಜು ಸ್ಯಾಮ್ಸನ್ ಕೂಡ ಅವರ ಹಿಂದೆಯೇ ಫೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 12 ರನ್ ಆಗುವಷ್ಟರಲ್ಲಿ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಕಳೆದುಕೊಂಡಿತ್ತು.
ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಜೋಸ್ ಬಟ್ಲರ್ ಕೆಲ ಕಾಲ ಏಕಾಂಗಿ ಹೋರಾಟವನ್ನು ನಡೆಸಿದರಾದರೂ ಅವರಿಗೆ ಇನ್ನೊಂದು ತುದಿಯಲ್ಲಿ ಸೂಕ್ತ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ 18.1 ಓವರ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ 57 ರನ್‌ಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿತು.
ಮುಂಬೈ ಇಂಡಿಯನ್ಸ್ ಪರವಾಗಿ ಬೌಲರ್‌ಗಳು ಅದ್ಭುತ ಪ್ರದರ್ಶನವನ್ನು ತೋರಿಸಿದರು. ಆದರಲ್ಲೂ ಜಸ್ಪ್ರೀತ್ ಬೂಮ್ರಾ ಎಸೆತಗಳಿಗೆ ಆರ್‌ಆರ್ ದಾಂಡಿಗರ ಬಳಿ ಉತ್ತರವೇ ಇರಲಿಲ್ಲ. 4 ಓವರ್‌ಗಳಲ್ಲಿ ಬೂಮ್ರಾ 4 ವಿಕೆಟ್ ಪಡೆದರು. ಟ್ರೆಂಟ್ ಬೋಲ್ಟ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ತಲಾ ಎರಡು ವಿಕೆಟ್ ಪಡೆದರೆ ರಾಹುಲ್ ಚಾಹರ್ ಹಾಗೂ ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ತಮ್ಮದಾಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications