ಆರ್‌ಸಿಬಿಯ ಆರೋನ್ ಫಿಂಚ್ ಅವರನ್ನು 'ಮಂಕಡ್' ಮಾಡದ ನೈಜ ಕಾರಣ ತಿಳಿಸಿದ ಅಶ್ವಿನ್
2019ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು 'ಮಂಕಡಿಂಗ್' ಮೂಲಕ ಔಟ್ ಮಾಡಿದ್ದ ಆರ್. ಅಶ್ವಿನ್ ದೊಡ್ಡ ಚರ್ಚೆ ಹುಟ್ಟುಹಾಕಿದ್ದರು. ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿಯೂ ಅವರಿಗೆ ಆರ್‌ಸಿಬಿಯ ಆರೋನ್ ಫಿಂಚ್ ಅವರನ್ನು ಔಟ್ ಮಾಡುವ ಅವಕಾಶವಿತ್ತು. ಅದನ್ನು ಅವರು ಕೈಬಿಟ್ಟಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರ ಸಲಹೆಯನ್ನು ಅವರು ಪಾಲಿಸಿದ್ದರು. ಹೀಗಾಗಿ ಮಂಕಡಿಂಗ್ ಮಾಡಿರಲಿಲ್ಲ ಎಂದೇ ಹೇಳಲಾಗಿತ್ತು. ಆದರೆ ನೈಜ ಕಾರಣವನ್ನು ಸ್ವತಃ ಅಶ್ವಿನ್ ಬಹಿರಂಗಪಡಿಸಿದ್ದಾರೆ.
ಮಂಕಡಿಂಗ್ ರೀತಿ ಔಟ್ ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂಬ ಚರ್ಚೆ ನಡೆಯುತ್ತಿದೆ. ಆರ್ ಅಶ್ವಿನ್ ಆ ರೀತಿ ಔಟ್ ಮಾಡಲು ತಾವು ಬಿಡುವುದಿಲ್ಲ ಎಂದು ರಿಕಿ ಪಾಂಟಿಂಗ್ ಹೇಳಿದ್ದರು. ಅಷ್ಟಾಗಿಯೂ ಆರ್‌ಸಿಬಿ ಆಟಗಾರ ಫಿಂಚ್ ಆ ಪಂದ್ಯದಲ್ಲಿ ಕ್ರೀಸ್ ಬಿಟ್ಟು ತುಂಬಾ ಹೋಗಿದ್ದರಿಂದ ಅವರನ್ನು ಔಟ್ ಮಾಡುವುದನ್ನು ಪಾಂಟಿಂಗ್ ಬಯಸಿದ್ದರು ಎಂದು ಅಶ್ವಿನ್ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.

ಪಾಂಟಿಂಗ್ ಕೂಡ ಬಯಸಿದ್ದರು
''ಟ್ವೀಟ್‌ನಲ್ಲಿ ಪಾಂಟಿಂಗ್ ಅವರನ್ನು ನಾನು ಟ್ಯಾಗ್ ಮಾಡಿದ್ದೆ. 'ಆತ ತುಂಬಾ ಮುಂದೆ ಹೋಗಿದ್ದ. ನನಗೇ ಆತನನ್ನು ರನ್ ಔಟ್ ಮಾಡಬೇಕು ಎಂದು ಎನಿಸಿತ್ತು' ಎಂದು ಪಾಂಟಿಂಗ್ ನನಗೆ ಹೇಳಿದ್ದರು'' ಎಂದು ಯೂಟ್ಯೂಬ್ ವಿಡಿಯೋದಲ್ಲಿ ಅಶ್ವಿನ್ ಹೇಳಿದ್ದಾರೆ.

ಫಿಂಚ್ ಒಳ್ಳೆ ಸ್ನೇಹಿತ
ಆಸ್ಟ್ರೇಲಿಯಾದ ಆಟಗಾರ ಆರೋನ್ ಫಿಂಚ್ ಹಾಗೂ ತಾವು ಇಬ್ಬರೂ ಉತ್ತಮ ಸ್ನೇಹಿತರು. ಹೀಗಾಗಿ ಬೇಲ್ಸ್ ತೆಗೆದುಬಿಡಲು ಮನಸು ಒಪ್ಪಲಿಲ್ಲ ಎಂದು ಫಿಂಚ್ ಅವರನ್ನು ಮಂಕಡಿಂಗ್ ಮಾರ್ಗದಲ್ಲಿ ಔಟ್ ಮಾಡುವುದಕ್ಕೆ ನಿರಾಕರಿಸಿದ್ದರ ಕಾರಣ ತಿಳಿಸಿದ್ದಾರೆ.

ದುರುಗುಟ್ಟುತ್ತಿದ್ದರು
'ನಾನು ಅಲ್ಲಿ ನಿಲ್ಲಿಸಿ ರನ್ ಔಟ್ ಮಾಡಲೇ ಅಥವಾ ಬೇಡವೇ ಎಂದು ಒಂದು ಕ್ಷಣ ಯೋಚಿಸಿದೆ. ಆದರೆ ನಾನು ಅಲ್ಲಿ ಯೋಚಿಸುತ್ತಾ ನಿಂತಿದ್ದಾಗ ಅವರು ಕ್ರೀಸ್‌ಗೆ ಮರಳುವುದನ್ನು ಬಿಟ್ಟು ನನ್ನತ್ತಲೇ ದುರುಗುಟ್ಟಿಕೊಂಡು ನೋಡುತ್ತಿದ್ದರು. ಅವರು ಏಕೆ ಗುರಾಯಿಸುತ್ತಿದ್ದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ದಿನಗಳಿಂದಲೂ ಆತ ನನಗೆ ಉತ್ತಮ ಸ್ನೇಹಿತ. ಆತ ಬಹಳ ಒಳ್ಳೆಯ ವ್ಯಕ್ತಿ. ನಾವು ಅನೇಕ ಸಂಜೆ ಒಟ್ಟಿಗೆ ಕುಳಿತು ಹರಟಿದ್ದೇವೆ. ಹೀಗಾಗಿ ಅದನ್ನು ಕೊನೆ ಎಚ್ಚರಿಕೆಯಾಗಿರಲಿ ಎಂದು ಬಿಟ್ಟುಬಿಟ್ಟೆ' ಎಂದಿದ್ದಾರೆ.

ಶಿಕ್ಷೆ ನೀಡಬೇಕು, ಆದರೆ ಪೊಲೀಸ್ ಅಲ್ಲ
'ಈ ರೀತಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವುದು ಕೌಶಲವೇನಲ್ಲ. ಆದರೆ ನೀವು ಪದೇ ಪದೇ ಕ್ರೀಸ್ ಬಿಟ್ಟು ಹೊರಗೆ ಹೋಗುತ್ತಿದ್ದರೆ ಬೌಲರ್‌ಗೆ ಬೇರೆ ಆಯ್ಕೆ ಇಲ್ಲ. ಕಳ್ಳರು ತಮ್ಮನ್ನು ಸರಿಪಡಿಸಿಕೊಳ್ಳದೆ ಹೋದರೆ ಕಳ್ಳತನ ನಿಲ್ಲುವುದಿಲ್ಲ. ನಾನು ಎಂದಿಗೂ ಪೊಲೀಸ್ ಆಗಿರಲು ಸಾಧ್ಯವಿಲ್ಲ. ಹೀಗಾಗಿ ಇಂತಹ ನಡೆಗೆ ಕಠಿಣ ಶಿಕ್ಷೆಯಾಗಬೇಕು' ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications