
ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಫೂರ್ತಿಯ ಸಂದೇಶವಿರುವ ಟ್ವೀಟ್ ಮಾಡಿದೆ. ಎಲಿಮಿನೇಟರ್‌ನಲ್ಲಿ ಬೆಂಗಳೂರಿಗೆ ಹೈದರಾಬಾದ್ ಸವಾಲೆಸೆಯಲಿದೆ.
ಶುಕ್ರವಾರ (ನವೆಂಬರ್ 6) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿರುವ ಆರ್‌ಸಿಬಿ 'ಸೋಲದೆ ಗೆದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ' ಎಂದು ಬರೆದುಕೊಂಡಿದೆ. ಜೊತೆಗೆ ನವದೀಪ್ ಸೈನಿಯ ಫೋಟೋ ಕೂಡ ಇದ್ದು, ಫೋಟೋದಲ್ಲಿ 'ನಮ್ಮ ಊರು ಬೆಂಗಳೂರು, ಗೆಲ್ಲಲೇ ಬೇಕು ಮೂರಲ್ಲಿ ಮೂರು' ಅಂತ ಬರೆದುಕೊಂಡಿದೆ.
ಹೈದರಾಬಾದ್ ವಿರುದ್ಧದ ಪಂದ್ಯವೂ ಸೇರಿ ಆರ್‌ಸಿಬಿ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಹಾಗಾದರೆ ಮಾತ್ರ ಆರ್‌ಸಿಬಿಯ 'ಕಪ್' ಕನಸು ನನಸಾಗಲಿದೆ. ಹೈದರಾಬಾದ್ ವಿರುದ್ಧ ಪಂದ್ಯ ಗೆದ್ದರೆ ಮುಂದೆ ಸೆಮಿಫೈನಲ್‌ನಲ್ಲಿ ಆರ್‌ಸಿಬಿ-ಡಿಸಿ ಮುಖಾಮುಖಿಯಾಗಲಿದೆ. ಅಲ್ಲೂ ಆರ್‌ಸಿಬಿ ಗೆದ್ದರೆ ಫೈನಲ್‌ನಲ್ಲಿ ಮುಂಬೈ ವಿರುದ್ಧ ಸೆಣಸಾಡಲಿದೆ.
ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಹೀಗಾಗಿ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವತ್ತ ಆರ್‌ಸಿಬಿ ಕಣ್ಣಿಟ್ಟಿದೆ. ಹಾಗಂತ ಸನ್ ರೈಸರ್ಸ್ ಹೈದರಾಬಾದ್ ಕೂಡ ಉತ್ತಮ ಪೈಪೋಟಿ ನೀಡಲಿದೆ.